ನೆನಪು ಕನಸುಗಳ ನಡುವೆ
ಕನಸಲೂ ನೆನಪನೇ ಗಳಿಸುತ್ತಲಿಹ
ಆಂತರ್ಯದ ನಡುವಣ ವಾಸ್ತವಸೇತುವೆಗೆ
ಹೆಸರಿಡಲಾಗದೇ ಹೆಸರು
"ನೆನಪು ಕನಸುಗಳ ನಡುವೆ"
ಇಳೆಯ ಗೆಳೆಯ...
ಬಾಗಿಲು ಇರಲಿಲ್ಲ
ಬಂಧಿಸಿ ಅವನ ದಿಟ್ಟಿಸಿ ನೋಡೆ
ಅವನೇ ಇರಲಿಲ್ಲ
ತಳಿರಿನ ಬಾಗಿಲು ಬಳ್ಳಿಯ ಕಿಟಕಿ
ಎಳೆದಿರ ರಂಗೋಲೆ
ತಳ್ಳಿರೆ ಅವನನು ಪರಿಮಳದರಳು
ಇರುಳಿಗೆ ಬೆಳಕಿಲ್ಲ
ಹೊಳೆದಿದೆ ಇರುಳಲಿ ಬೆಳ್ಳನೆ ಹರಳು
ಬೆರಳಲಿ ಅರಳಿಲ್ಲ
ತೆರೆದಿದೆ ಚಿಲಕ ಕದ ತೆರೆದಿಲ್ಲ
ತೆರೆಯುವರಾರೀಗ
ಓಡುವ ಮೋಡವು ನಾಳೆಯ ನೀರು
ನೀರಿಗೆ ನೆರಳಿಲ್ಲ
ದೋಣಿಯು ಸಾಗದು ಓಡುವ ಮೋಡದಿ
ಮೋಡವೆ ನೀರಲ್ಲ
ಬೆರಳಿಗೂ ಅಂಚಿದೆ ಮರಳಿನ ಬಯಲಿದೆ
ಅಕ್ಷರ ಅರಳಿಲ್ಲ
ಗೆರೆ ಎಳೆದಿದೆ ಮಳೆ ಸೆಳೆಯುತ ಇಳೆಯನು
ಚಿತ್ರವ ಬರೆದಿಲ್ಲ
ಮಾತನು ಮುಗಿಸುತ ಮೌನವು ಹೇಳಿರೆ
‘ಏನೂ ಬೇಕಿಲ್ಲ’
ಗೋಡೆಯ ಚಿತ್ರದಿ ಕುಳಿತಿಹ ಮಾತಿಗೆ
ಕಣ್ಣೇ ಇರಲಿಲ್ಲ
ತಳ್ಳಿಹ ಮೋಡವು ಹನಿಯಾಗುವುದು
ಹನಿಗೆ ನೋವಿಲ್ಲ
ಮೋಡದ ನೋವಿಗೆ ಹೆಸರೇ ಇಲ್ಲ
ಹೆಸರೂ ಬೇಕಿಲ್ಲ
ಬಳ್ಳಿಯ ಬರೆದು ಅವನನು ಕಟ್ಟಿ
ನಗುತಲೆ ನಡೆದಿದ್ದೆ
ನವಮಿಯು ನಡೆದು ಹುಣ್ಣಿಮೆ ಹರಿದಿರೆ
ಅವನೆದುರಲಿ ಬೀಗಿದ್ದೆ
ಹುಣ್ಣಿಮೆ ಸರಿಯುತ ನವಮಿಯು ನೆರೆದಿರೆ
ಯಾಕೋ ಸೊರಗಿದ್ದ
ಕಟ್ಟಿದ ಬಳ್ಳಿಯ ಸಾಲೊಳಗಿಂದ
ಜಾರಿ ನಕ್ಕಿದ್ದ
ಒಡಂಬಡಿಕೆ
ಅದೊಂದು ಚಂದದ ಗಳಿಗೆ. ಆ ಸುಸಂದರ್ಭವೆಂದರೆ ಶ್ರೀ ಜಿ. ಜಿ.ಹೆಗಡೆ, ಕೋಡಗದ್ದೆ ಇವರ ಪರಿಚಯವಾಯ್ತು. ಮಾತಿನ ಮಧ್ಯೆ ಜಿ.ಜಿ.ಹೆಗಡೆಯವರು ಹೇಳಿದರು ‘ಆನೂ ಒಂದು ಪುಸ್ತಕ ಬರಕಂಜಿ’ (ನಾನೊಂದು ಪುಸ್ತಕ ಬರೆದಿಟ್ಟುಕೊಂಡಿದ್ದೇನೆ) . ಆ ಸರಳತೆಯೊಳಗೆ ಕಳೆದುಹೋದೆ.
‘ಇಲ್ಲಿ ಟೈಂ ಪಾಸ್ ಆಗುವುದು ಕಷ್ಟ’ ಎಂದರು. ‘ನನ್ನಲ್ಲಿ ಕೆಲವು ಪುಸ್ತಕಗಳಿವೆ, ಅವೆಲ್ಲ ಬಹುಷಃ ನೀವು ಓದಿದವುಗಳೇ ಆಗಿರಲಿಕ್ಕೆ ಸಾಕು’ ಅಂದೆ. ಇಲ್ಲ, ನಾಲ್ಕಾರು ವರ್ಷಗಳಿಂದೀಚೆಗೆ ಬಂದ ಪುಸ್ತಕಗಳನ್ನ ಓದಲಾಗಿರಲಿಲ್ಲ’ ಎಂದರು. ಮಾತು ಹೀಗೆಯೇ ಅರಳಿಕೊಳ್ಳುತ್ತ ವಸುಧೇಂದ್ರರ ತನಕ ಬಂದು ನಿಂತಿತು.
ಈ ಸಲ ಭಾರತಕ್ಕೆ ಬಂದಾಗ ಸಂದೀಪ ಗಿಫ್ಟಿಸಿದ್ದ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ವಸುಧೇಂದ್ರರ ಲಲಿತ ಪ್ರಬಂಧಗಳ ನೆನಪಾಯ್ತು. ಆ ಪುಸ್ತಕವನ್ನ ಉಡುಗೊರೆ ಕೊಡುವ ಮುನ್ನ ಸಂದೀಪ ಕೇಳಿದ್ದ ‘ನೀ ವಸುಧೇಂದ್ರ ಅವರನ್ನ ಓದಿದ್ಯಾ?’
‘ಇಲ್ಲೆ, ಹಂಗಂದ್ರೆ ಯಾರು?’ ಅಂತ ಕೇಳಿದ್ದೆ ಯಾವತ್ತಿನದೇ ಪೆದ್ದುತನದಲ್ಲಿ.
‘ಇದನ್ನ ಓದು, ಚೊಲೊ ಇದ್ದು’ ಅಂತ ಕೊಟ್ಟ। ಮುಖಪುಟ ಎಲ್ಲೋ ನೋಡಿದೀನಿ ಅನ್ನಿಸ್ತು। ತಕ್ಷಣ ನೆನಪಿಗೆ ಬಂತು ‘ನನ್ನ ಬ್ಲಾಗ್ ಪ್ರೊಫೈಲ್ ಫೋಟೋ ಇದೇ ಥರಹವೇ ಇದೆ’ ಅಂತ। ಆ ಪುಸ್ತಕದ ಮುಖಪುಟದಲ್ಲಿ ಅಮ್ಮನ ಕೈ ಮತ್ತು ಪಾಪುನ ಕಾಲು ಇತ್ತು। ನನ್ನ ಬ್ಲಾಗ್ ಪ್ರೊಫೈಲ್ ಅಲ್ಲಿರೋ ಫೊಟೋ ಅಲ್ಲಿ ಪಾಪುನ ಕಾಲು ಮಾತ್ರ ಇದೆ। ಕಣ್ಣಗಲಿಸಿ, ಹಲ್ಕಿರಿದು ‘ಎಷ್ಟ್ ಚೊಲೋ ಇದ್ದಲಾ....’ ಅಂದೆ। ಅದ್ಕೇ ಕೊಟ್ಟಿದ್ದು ಅಂದ। ಸಂದೀಪನಿಗೆ ಥ್ಯಾಂಕ್ಸ್ ಹೇಳಿದ್ನೋ ಬಿಟ್ನೋ ಮರ್ತಿದೀನಿ। ಆ ಪುಸ್ತಕವನ್ನ ಓದಿಯಾದ್ಮೇಲೆ ಸಂದೀಪನಿಗೆ ಥ್ಯಾಂಕ್ಸ್ ಹೇಳಲೇಬೇಕು ಎನ್ನಿಸಿತ್ತು.
ಆವತ್ತು ಸಂಜೆ ಗಾಂಧೀಬಾಜಾರ್ ಅಲ್ಲಿ ‘ಅಂಕಿತ’ ಹೊಕ್ಕಿದ್ದಾಗ ‘ಯುಗಾದಿ’ ‘ಚೇಳು’ ಎಲ್ಲ ತಗೊಂಡು ಮರುದಿನ ಯುಗಾದಿ ಹಬ್ಬ ಇದೆ ಅಂತ ಊರಿಗೆ ಬಂದಿದ್ದೆಲ್ಲ ನೆನಪಾಗಿ ‘ಮಾವಾ...ನನ್ ಹತ್ರ ಯುಗಾದಿ, ಚೇಳು ಎಲ್ಲ ಇದ್ದು, ನಿಮಗೆ ಕೊಡ್ತಿ ನಾನು’ ಅಂದೆ. ‘ನಮ್ಮಮ್ಮ ಅಂದ್ರೆ ನಂಗಿಷ್ಟ ನಂಗೂ ತುಂಬಾ ಇಷ್ಟ, ನೀವು ಓದಿ ನೋಡಿ ನಿಮಗೂ ಇಷ್ಟ ಆಗ್ತು’ ಅಂದಿದ್ದೆ.
ಇವತ್ತು ಮತ್ತೆ ಅವರನ್ನ ಭೇಟಿಯಾಗಿದ್ದೆ। ‘ವಿಚಿತ್ರಾನ್ನ’ ಪುಸ್ತಕದ ಹಾಳೆ ತಿರುವುತ್ತ ‘ವಿಜಯ ಕರ್ನಾಟಕದಲ್ಲಿ ಜೋಶಿಯವರ ಅಂಕಣ ಓದ್ತಿ ನಾನು’ ಅಂದ್ರು. ‘ಇವತ್ತು ಸಾಹಿತ್ಯದ ಬಗ್ಗೆ ಮಾತಾಡುತ್ತಿದ್ದರೆ ಕೇಳಲು ಪುರುಸೊತ್ತು ಸಿಗದಿರುವಂಥಹ ವೃತ್ತಿಯಲ್ಲಿದ್ದೂ ಇವರೆಲ್ಲ ಪುಸ್ತಕ ಬರೆದು ಸಾಧಿಸಿದ್ದಾರಲ್ಲ’ ಅಂತ ಖುಷಿಪಟ್ಟರು ಜಿ.ಜಿ.ಹೆಗಡೆಯವರು. ನಿಜ, ಆಸಕ್ತಿಯಿರುವಲ್ಲಿ ಸಮಯ ತಾನಾಗೇ ಹೊಂದಿಕೊಳ್ಳುತ್ತದೆ ಎನ್ನಿಸಿತು. ‘ಯಾವುದೇ ವಿಷಯದ ಬಗ್ಗೆ ಒಲವು, ಆಸಕ್ತಿ ಇದ್ರಷ್ಟೇ ಇವೆಲ್ಲ ಸಾಧ್ಯ’ ಅಂತ ಹೇಳಿದ ಜಿ.ಜಿ.ಹೆಗಡೆಯವರ ಮಾತು ಅದೆಷ್ಟು ಸತ್ಯ ಎನ್ನಿಸಿತು.
‘ಮಂಕುತಿಂಮನ ಕಗ್ಗ’ ಗಳಲ್ಲೊಂದಿಷ್ಟನ್ನು ತಮ್ಮ ಕೈಯ್ಯಾರೆ ಟೈಪಿಸಿ, ಪ್ರಿಂಟ್ ಔಟ್ ತೆಗೆದುಕೊಟ್ಟರು. ಅತ್ತೆ(ಜಿ।ಜಿ।ಹೆಗಡೆಯವರ ಪತ್ನಿ) ಯವರು ಕೊಟ್ಟ ರುಚಿಯಾದ ಖೀರನ್ನು ನಾನು ಸವಿಯುತ್ತಲಿದ್ದರೆ ಮಾವ(ಜಿ.ಜಿ.ಹೆಗಡೆಯವರು) ರಾಗವಾಗಿ ಕಗ್ಗವನ್ನು ಹೇಗೆ ಹಾಡಿಕೊಂಡರೆ ನಾಲಿಗೆಯಲ್ಲಿಯೇ ಉಳಿದೀತು ಅಂತ ತೋರಿಸುತ್ತಿದ್ದರೆ ನನ್ನ ನಾಲಿಗೆಯಲ್ಲಿದ್ದ ರುಚಿ ಖೀರಿನದೋ ಅಥವಾ ಕಗ್ಗದ್ದೋ ಗೊತ್ತಾಗಲಿಲ್ಲ.
ಬರುವಾಗ ಜಿ.ಜಿ.ಹೆಗಡೆಯವರು ತಮ್ಮ ಕವನ ಸಂಕಲನದ ಪ್ರತಿಯೊಂದನ್ನು ಕೈಗಿತ್ತರು. ಮತ್ತೆ ಯಾವತ್ತಿನಂಗೆ ಕಣ್ಣಗಲಿಸಿ ಹಲ್ಕಿರಿದು ‘ಥ್ಯಾಂಕ್ ಯೂ’ ಅಂದೆ. ‘ಆವರಣ’ ಹಾಗೂ ‘ಜಯಂತ ಕಾಯ್ಕಿಣಿ ಕಥೆಗಳು’ ಇವೆರಡನ್ನು ಅವರಿಗೆ ಓದುವುದಕ್ಕೋಸಕರ ಕೊಟ್ಟು, ಎಲ್ಲರಿಗೂ ಟಾಟಾ ಹೇಳಿ ಅವರ ಮನೆಯಿಂದ ಹೊರಟಿದ್ದೆ. ದಾರಿಯಲ್ಲಿಯೇ ಅವರ ಕವನ ಸಂಕಲನ ತೆರೆದು ಓದಲಾರಂಭಿಸಿದ್ದೆ. ಸ್ಟ್ರೀಟ್ ಲೈಟ್ ಎದುರುಬಂದಾಗೆಲ್ಲ ಸರಸರನೆ ಓದಿಕೊಂಡು ಕತ್ತಲು ಬೆಳಕಿನಾಟದಲ್ಲಿ ಎರಡು ಕವನ ಓದುವಷ್ಟರಲ್ಲಿ ಮನೆ ತಲುಪಿದ್ದೆವು. ನನ್ನವನು ‘ಮನೆ ಬಂತು, ಇಳಿ ’ ಅಂದ. ‘ಇವತ್ತು ಈ ಕವನ ಪುಸ್ತಕ ನಂಗೆ ಕೊಡು, ನಾನು ಬೇಗ ಓದಿ ಮುಗ್ಸಿ ನಾಳೆ ನಿಂಗೆ ಕೊಡ್ತಿ’ ಅಂದವನ ಮಾತಿಗೆ ದುರುಗುಟ್ಟಿ ಅವನ ನೋಡಿದ್ದೇ ಉತ್ತರ. ‘ನೀನಿವತ್ತು ಇದನ್ನ ಓದು’ ಅಂತ ಬೇರೊಂದು ಚಂದದ ಪುಸ್ತಕವನ್ನ ಅವನಿಗೆ ಹಿಡಿಸಿ ಇಲ್ಲಿ ಬಂದು ಒಬ್ಬಳೇ ಕುಳಿತು ಜಿ.ಜಿ.ಹೆಗಡೆಯವರ ಚಂದದ ಕವನಗಳನ್ನ ಓದ್ತಾ ಇದ್ರೆ ಯಾಕೋ ಅವುಗಳನ್ನ ನಾನೊಬ್ಬಳೆ ಓದೋಕೆ ಮನಸಾಗ್ಲಿಲ್ಲ. ಒಂದು ಕವನವನ್ನು ನೀವುಗಳೂ ನನ್ನೊಡನೆ ಓದಿ ಸವಿಯಲಿ ಎನ್ನಿಸಿತು. ಕವನ ಸಂಕಲನದ ಶೀರ್ಷಿಕೆ ಏನಂತ ಕೇಳಿದ್ರಾ? ಒಡಂಬಡಿಕೆ . ಅದರೊಳಿಗಿಂದ ಈ ಒಂದು ಕವನ ನಿಮ್ಮೆಲ್ಲರಿಗಾಗಿ.
ಸಮರಸ
ಎಲ್ಲರಂತೆಯೆ ನೀನಿರು ಎಲ್ಲರೊಳಗೊಂದಾಗಿರು
ಬಲ್ಲೆನೆಲ್ಲವನೆಂಬ ಗರ್ವದ ಗುಲ್ಲುಸಲ್ಲದು ನಿಷ್ಠುರ
ನಿನ್ನ ಭಿನ್ನತೆ ಇನ್ನು ಅಧಿಕತೆ
ಭೇದ ಮೆರೆಸುವುದೇತಕೆ?
ಸುಖದ ಆಶಯ ಕೀರ್ತಿ ಹಂಬಲ
ಸಿರಿಪದದ ಪಟ್ಟಕೆ ಕಾತರ
ಪ್ರೀತಿಯಪ್ಪುಗೆ ಪ್ರೇಮ ವರ್ಷಕೆ
ಮಮತೆ ಹೃದಯದ ವಿಕಸನ
ಒಲವು ಹಲಬಗೆ ಚಲವು ತಿಳಿದೊಡೆ
ಗೆಲವು ಲೋಕಕೆ ಸಂಭ್ರಮ
ಮುಗಿಲಗಣ್ಣಿನ ಧಾರೆ ಧುಮುಕದೆ
ನೆಲದ ಎದೆಗುದಿ ಸ್ಪಂದನ
ಹರಿವ ನದಿ ತೊರೆ ತೆರದಿ ಬದುಕಿನ
ಜೀವವಾಹಿನಿ ಧಾವನ
ಹುಟ್ಟುಸಾವಿನ ಸತ್ಯ ಶೋಧನೆ
ಮುಟ್ಟು ಕೊನೆ ಪರ್ಯಂತರ
ಉಗಮಕೆಡೆಯದೊ ಪೂರ್ವದಾರ್ಜಿತ
ಜಗವೆ ಚೇತನ ನಿಗಮವು
*****************************
ಓದುತ್ತ ಕುವೆಂಪು ನೆನಪಾಗುತ್ತಿದ್ದಾರೆ। ನಿಜ, ಕೋಡಗದ್ದೆ ಶಿವಮೊಗ್ಗೆಯಿಂದೇನೂ ದೂರವೇನಿಲ್ಲ.
ಮುರುಕು ಮಂಟಪದೊಳಗಿನ ಹರುಕುಬುಟ್ಟಿಯೊಳಗೆ...
*ಪುಟ್ಟಪುಟ್ಟಸಾಲುಗಳು ಕಟ್ಟಿಕೊಳ್ಳುತ್ತ ಕಟ್ಟಿಹಾಕುತ್ತವೆ, ಕಟ್ಟನ್ನು ಬಿಡಿಸಿಕೊಳ್ಳುವ ಯತ್ನದಲ್ಲಿ ಬರೆಸಿಕೊಳ್ಳುತ್ತವೆ, ಒರೆಸಿಬಿಡುತ್ತವೆ ।
**********
*ಅಕ್ಷರಗಳನ್ನೇ ಬಿತ್ತಿ ಅಕ್ಷರಗಳನ್ನೆ ಬೆಳೆಯುವ ಕನಸು। ಅಂತದ್ದೊಂದು ದೃಶ್ಯ ಅವನು ಕೆತ್ತಿದ ಯಾವ ಚಿತ್ರದಲ್ಲಿಯೂ ಇರುವುದಿಲ್ಲ, ಅವಳು ಬಿಡಿಸಿದ ಚಿತ್ರಗಳಲ್ಲಿಯೂ।
**********
*‘ಹೀಗೆ ಶುರುವಾದದ್ದು ಇಲ್ಲೀತನಕ ಬಂದು ಮುಟ್ಟುತ್ತದೆ ಅಂತ ಅವಳಿಗೆ ಕಿಂಚಿತ್ ಕಲ್ಪನೆಯೂ ಇರಲಿಲ್ಲ’ ಅವನು ಬರೆದಿಟ್ಟು ಹೋದ ಸಾಲನ್ನ ನಾನು ಕಥೆಯಾಗಿಸ್ತೀನಿ ಅಂತ ನಂಗೂ ನಂಬಿಕೆ ಇರಲಿಲ್ಲ।
**********
*ಕಲ್ಪನೆಗಳ ಕೆತ್ತು, ಕನಸಾಗುವುದಿಲ್ಲ। ಕನಸುಗಳನ್ನು ಹುಗಿ, ಸತ್ತು ಶವವಾಗುತ್ತವೆ, ನಿನ್ನದೇ ನೆನಪುಗಳಾಗಿ ಬೆರೆತುಹೋಗುತ್ತವೆ। ಕನಸುಗಳ ಬಿತ್ತು, ನನಸಾಗುತ್ತವೆ, ನಿನ್ನ ಜೊತೆಯಾಗಿರುತ್ತವೆ।
**********
*ಇವಳು ಶಕುಂತಲೆಯೋ ಅಥವಾ ಶಾಂತಲೆಯೋ ಎಂಬ ಪ್ರಶ್ನೆಗೆ ಉತ್ತರ ಹುಡುವಾಗ ಯೋಚಿಸುತ್ತಿದ್ದ। ಕೊನೆಗೂ ತಾನು ದುಶ್ಶಂತನೋ, ವಿಷ್ಣುವರ್ಧನನೋ ಅರಿವಾಗಲೇ ಇಲ್ಲ।
**********
*‘ಆಹಾ॥ಏನ್ ಮಹಾ...ಪಾನಿ ಪೂರಿ, ಅದನ್ ತಿನ್ನೋಕೆ ಜಯನಗರ ಫೋರ್ಥ್ ಬ್ಲಾಕ್ ಗೇ ಹೋಗ್ಬೇಕಾ? ಹನುಮಂತನಗರ ಕಗ್ಗೀಸ್ ಬೇಕರಿ ಎದ್ರುಗಡೆ ಸಿಗೋ ಮಸಾಲೆಪೂರಿ ತಿಂದ್ರೆ ಆಮೇಲೆ ಅಲ್ಲಿಂದ ನೀವ್ ಕದಲೋಲ್ಲ॥ಗೊತ್ತಾ?’
**********
*ದಿನಾ ಅವನನ್ನ ಕೊರೀತಿದ್ದೆ ಸಿಗರೇಟ್ ಸೇದ್ಬೇಡ, ಬಿಟ್ಬಿಡು ಅಂತ। ಹ್ಞೂ...’ಅಂತಿದ್ದೋನು ಕೊನೆಯಲ್ಲಿ ಬಿಟ್ಟಿದ್ದು ಸಿಗರೇಟನ್ನಲ್ಲ, ನನ್ನ ಜೊತೆ ಮಾತು। ಸಿಗರೇಟಿಗಿಂತ ನನ್ನ ಮಾತು ಅವನನ್ನ ಹೆಚ್ಚು ಸುಟ್ಟಿತ ಅಂತ ಯೋಚನೆ. ನೀತಿಗಳು ಗಳಿಸಿಕೊಟ್ಟಷ್ಟನ್ನೇ ಕಳೆದುಹಾಕಬಲ್ಲವು.
**********
*ಒಳ್ಳೇ ಕಾಫಿ ಬೇಕಾದ್ರೆ ಬನಶಂಕರಿ ಕಾಂಪ್ಲೆಕ್ಸ್ ಹತ್ರ ಸುಳಿದಾಡ್ತಿದ್ರೆ ಕಾಫಿ ಡೇ ಕಾಫಿಯ ಪರಿಮಳ ಅಲ್ಲೇ ಸುಳಿದಾಡ್ತಿರತ್ತೆ। ಸುಗಂಧ ದೂರದವರೆಗೆ ಪಸರಿಸಿಕೊಳ್ಳಬಲ್ಲುದು, ಘಮದ ನೆನಪು ಹೊಸ ಘಮವನ್ನಿತ್ತು ಖುಷಿಕೊಡಬಲ್ಲುದು।
**********
*ಬನಶಂಕರಿ ಕಾಂಪ್ಲೆಕ್ಸ್ ಹತ್ರ ಇರೋ ಕಾಫಿ ಡೇ ಗೆ ಹೋದ್ರೆ ಕಾಫಿ ಸಿಗತ್ತೆ, ಕಾಫಿಯ ಘಮ ಮೆಡಿಕಲ್ ಕಾಲೇಜಿನ ಹುಡುಗ ಹುಡುಗಿಯರ ಸಿಗರೇಟಿನ ಹೊಗೆಯೊಳಗೆ ಹುಗಿದುಹೋಗಿರತ್ತೆ। ತಾಣಗಳ ಘಮದ ತ್ರಾಣವನ್ನು ಸುತ್ತಲಿನ ಗಾಳಿ ನುಂಗಬಲ್ಲುದು।
**********
*ಕಲ್ಲಾಗಿದ್ದೆ। ಅವನು ಕೊಟ್ಟ ರೂಪಕ್ಕೆ ಶಿಲಾಬಾಲಿಕೆಯಾದೆ। ಶಾಂತಲೆ ಅಂದ। ಅವನು ಕೊಟ್ಟ ಉಂಗುರ ಕಳಕೊಂಡು ಶಕುಂತಲೆಯಾದೆ।
****************************************************************************************
ಹೊಸ ಕದಿರು
ಹೆಬ್ಬಾಗಿಲಿಗೆ ಹೋಗಿ ನೀರಿನ ಬಕೀಟನ್ನ ಇಟ್ಟೆ। ಹಿಡಿ ಬಚ್ಚಲಮನೆ ಬಾಗಿಲ ಮೂಲೆಯಲ್ಲೇ ಇದ್ದಿದ್ದು ನೆನಪಾಯ್ತು। ಅಯ್ಯೋ ಮರೆವೆ ಅಂದುಕೊಂಡು ಬಚ್ಚಲಮನೆಗೆ ಹೋದೆ। ಅಂವ ಬಚ್ಚಲ ಒಲೆಯ ಬೆಂಕಿಯ ಮುಂದೆ ಕುಳಿತಿದ್ದ ಹಸಿಕಟ್ಟಿಗೆಯ ಹೊಗೆಗೆ ಮುಖ ಸಿಂಡರಿಸಿಕೊಂಡು. ಒಲೆಯೊಳಗಿದ್ದ ಒದ್ದೆಕಟ್ಟಿಗೆಯ ಬೆಂಕಿ ಹೊತ್ತಿಕೊಳ್ಳಲೋ ಬೇಡವೋ ಅನ್ನುವ ರೀತಿಯಲ್ಲಿ ಹೊಯ್ದಾಡುತ್ತಲಿತ್ತು. ಒಲೆಯೊಳಗಿನ ಕಟ್ಟಿಗೆಗಳನ್ನ ಆ ಕಡೆಯದನ್ನ ಈ ಕಡೆಗೆ ಈ ಕಡೆಯದನ್ನ ಆ ಕಡೆ ಮಾಡುತ್ತ ಹೊಗೆ ಕಡಿಮೆಯಾಗಬಹುದೇನೋ ಅಂತ ಅಂವ ಪರೀಕ್ಷೆಮಾಡುತ್ತ ಕುಳಿತಿದ್ದ ಹಾಗೆ ಅನ್ನಿಸಿತು. ಬಾಗಿಲನ್ನ ಓರೆಮಾಡಿದೆ. ಅಲ್ಲಿ ಹಿಡಿ ನಿಲ್ಲಲು ತ್ರಾಣವಿಲ್ಲದೇ ಮೂಲೆಗೆ ಬಾಗಿತ್ತು. ಎತ್ತಿಕೊಂಡು ಅಂವ ಅಲ್ಲಿ ಕುಳಿತಿರುವುದು ಗೊತ್ತೇ ಆಗಿಲ್ಲ ಅನ್ನುವ ಹಾಗೆ ಹೆಬ್ಬಾಗಿಲ ಕಡೆ ಮುಖ ಮಾಡ್ದೆ. ಬೆಳ್ ಬೆಳಿಗ್ಗೆ ಹಿಡಿಯನ್ನ ಅವಂಗೆ ಕಾಣಿಸೋದು ಬೇಡಾಂತ ಹಿಡಿ ಹಿಡ್ಕೊಂಡ ಕೈಯನ್ನ ಬೆನ್ನಿಗಾನಿಸಿಕೊಂಡು ಈ ಕಡೆಯಿಂದ ಬಂದೆ. ಅವನೂ ಯಾವುದೂ ಗೊತ್ತೇ ಆಗಲಿಲ್ಲವೆಂಬಂತೆ ಮುಖಮೇಲೆ ಮಾಡಿ ಹಣೆಯನ್ನ ಮೇಲೆ ಸೇರಿಸಿ ನಿರಿಗೆ ಮಾಡಿಕೊಂಡು ಹೊಗೆಯನ್ನ ಆಸ್ವಾದಿಸ್ತಾ ಇದ್ದ.
ಹೆಬ್ಬಾಗಿಲಿಗೆ ಬಂದು ಅಂಗಳದ ಕಡೆ ನೋಡ್ದೆ. ಮಳೆ ಆಗಷ್ಟೇ ನಿಂತಿತ್ತು. ಹದಿನೈದು ದಿನದ ಹಿಂದೆಯೇ ಅಲ್ಲಲ್ಲಿ ಹಸಿರುಬೊಟ್ಟಿನ ಹಾಗೆ ಕಾಣಿಸುತ್ತಲಿದ್ದ ಡೇರೆಯ ಮೊಗ್ಗುಗಳ ಬಣ್ಣ ಹಳದಿ, ಕೆಂಪು ಬಣ್ಣಕ್ಕೆ ತಿರುಗುತ್ತಲಿತ್ತು. ಆ ಮೂಲೆಯಿಂದ ಮೂರನೇ ಸಾಲಿನಲ್ಲಿದ್ದಿದ್ದು ಕಡ್ಡಿ ಡೇರೆ. ಕೊಡೆ ಅಮಾಸೆ ಹಬ್ಬಕ್ಕೆ ಅಪ್ಪ ಕರೆಯೋಕೆ ಬಂದಾಗ ಅಮ್ಮ ಅಪ್ಪನ್ ಹತ್ರ ಒಂದು ಕಿಳ್ಳು ಕಳಿಸಿದ್ರು. ‘ಒಂದೇ ಕಿಳ್ಳು ಇತ್ತು, ಶಕುಗೆ ಇಷ್ಟ..ನೆಟ್ಟು ಹೂಮುಡೀಲಿ ಅಂತ ಕಳಿಸಿದ್ಳು’ಅಂದಿದ್ರು ಅಪ್ಪ. ‘ ಆ ಕಡ್ಡಿ ಡೇರ್ಯನೇ ಹಂಗೆ...ಕಿಳ್ಳು ಬರೂದು ಕಡ್ಮೆ...ಅಪ್ರೂಪ’ ಅಂತ ಅಪ್ಪನ ಮಾತಿಗೆ ಸಮಜಾಯಿಷಿ ನೀಡಿದ್ದರು ಅತ್ತೆಮ್ಮ. ಜೋಪಾನವಾಗಿ ನೆಟ್ಟಿದ್ದೆ. ಯಾಕೋ ಎಲ್ಲಗಿಡಕ್ಕಿಂತ ಈ ಗಿಡದ ಮೇಲೆ ನಂಗೆ ಜಾಸ್ತಿ ಅಕ್ಕರೆ. ಆ ಗಿಡದಲ್ಲಿ ಅಮ್ಮನೇ ನಿಂತ ಹಾಗೆ. ಅಪ್ಪ ತಂದುಕೊಟ್ಟು ಹೋದಂದು ನೆಡುವಾಗೆಲ್ಲ ಅಮ್ಮನ ಮನೆಯದೇ ನೆನಪು.
ಮಂಗಲ ಮನೆಯಲ್ಲೇ ಇದ್ರೂ ಈಶ, ಆಶಿ , ಕೇಶವ ಎಲ್ಲರಿಗೂ ಶಾಲೆ ಶುರುವಾಗಿರ್ಬೇಕು। ಆದ್ರೂ ಹಬ್ಬ ಬಂದ್ರೆ ಅಕ್ಕ ಅಕ್ಕ ಅಂತ ನನ್ನ ನೆನಪಿಸ್ಕೊಳ್ದೇ ಇರಲಾರ್ರು. ಅಮ್ಮ ಕುಟ್ಟವಲಕ್ಕಿ ಮಾಡಿದಾಗ ಈಗಲೂ ನನಗೆ ಸ್ವಲ್ಪ ಜಾಸ್ತಿ ಪಾಲೇ ಇಟ್ಟಿರಬಹುದು. ಹೊರಟುಬರುವಾಗ ಕೇಶವಂಗೆ ಹೇಳಿ ಬಂದಿದ್ದೆ ‘ಅಮ್ಮ ಕುಟ್ಟವಲಕ್ಕಿ ಮಾಡಿದ್ರೆ ನನ್ನ ಪಾಲು ನೀನೇ ತಿನ್ನು’ ಅಂತ. ಕೇಶವಂಗೆ ನನ್ನ ಹಾಗೆ... ಕುಟ್ಟವಲಕ್ಕಿ ಅಂದ್ರೆ ಇಷ್ಟವೇ. ಬಾಳೆಲೆಯಲ್ಲಿ ಅಮ್ಮ ಬಡಿಸಿಟ್ರೆ ಒಂದು ತುತ್ತಾದ್ರೂ ನನ್ ಪಾಲನ್ನ ಕಸಿದು ತಿನ್ನದೇ ಇದ್ರೆ ಅವಂಗೆ ಹೊಟ್ಟೆತುಂಬ್ತಿರಲಿಲ್ಲ. ನಾನಂದ್ರೆ ಎಷ್ಟು ಇಷ್ಟ. ಶಾಲೆಗೆ ಹೋಗೋದಕ್ಕೆ ಏನಾದ್ರೂ ಬೇಕಿದ್ರು ನನ್ ಮುಂದೆ ಹೇಳೋನು. ‘ ಶಾಲೇದು ನೀಲಿಚಡ್ಡಿ ಹರ್ದೋಯ್ತು ಅಕ್ಕವ್ವ..., ಪೆನ್ನಿನ್ ಕಡ್ಡಿ ಖಾಲಿ, ಚಪ್ಪಲಿ ಬಾರು ಕಿತ್ತೋಯ್ತು...’ಹೀಗೆ....ಅಪ್ಪನ್ ಮುಂದೆ ಹೇಳೋಕೆ ಭಯ. ಕೇಶವ ಹೇಳಿದ್ರೂ ಅಪ್ಪ ಕೊಡಿಸ್ತಿರಲಿಲ್ಲ. ಎಲ್ಲದಕ್ಕೂ ಕೊನೆಕೊಯ್ಲು ಮುಗೀಲಿ, ಅಡ್ಕೆ ಮಾರಿದ್ ದುಡ್ ಬರ್ಲಿ ಅನ್ನೋರು. ಅದೇ ನಾನು ಹೇಳಿದ್ರೆ ಕಷ್ಟಪಟ್ಟಾದ್ರೂ ಅಪ್ಪ ಕೊಡಿಸ್ತಾರೆ ಅನ್ನೋ ನಂಬಿಕೆ ಕೇಶವಂಗೆ. ಬರೋದಿನ ನನ್ ಮುಂದೆ ಬಂದು ಹೇಳಿದ್ದ ‘ಅಕ್ಕವ್ವ॥ಪಾಟೀಚೀಲ ಹರ್ದೋಗಿದೆ, ನಿಂಗೊತ್ತಲ್ಲ... ಹೋದ್ವರ್ಷನೆ ಹರ್ದೋಗಿತ್ತು, ಹೊಲ್ದಿದ್ದೆ, ಈವರ್ಷ ಹೊಲಿಯೋಕೆ ಬರ್ದಿರೋಷ್ಟು ಹರ್ದೋಗಿದೆ...’ ಅಂದಿದ್ದ. ಪಾಪ...ಹೊಸದು ತಗೊಂಡ್ನೋ ಇಲ್ವೋ...ಅಪ್ಪನ್ ಮುಂದೆ ಹೇಳೋಕೆ ಭಯವಾಗಿ ಸುಮ್ನೇ ಇದ್ಬಿಟ್ನೋ ಏನೋ. ಅಪ್ಪ ಆವತ್ತು ಇಲ್ಲಿಗೆ ಬಂದಾಗ ನಂಗೆ ನೆನಪಾಗಿತ್ತು. ಅತ್ತೆಮ್ಮನ್ ಮುಂದೆ ಹರಕುಪಾಟಿಚೀಲದ ಬಗ್ಗೆ ಮಾತಾಡಿದ್ರೆ ಅತ್ತೆಮ್ಮ ಏನಂದುಕೊಳ್ತಾರೋ ಅಂತ ಸುಮ್ನಾಗಿದ್ದೆ.
ಮಂಗಲ ನನ್ ಮದ್ವೆ ನಿಕ್ಕಿ ಆದಾಗ್ಲೇ ತಾನೇ ಜಡೆಹಾಕ್ಕೊಳ್ಳೋದನ್ನ ಕಲಿಯೋಕೆ ಶುರುಮಾಡಿದ್ಲು। ಈಗ ದಿನಾಲೂ ತಾನೇ ಜಡೆ ಹಾಕ್ಕೊಳ್ತಿರಬಹುದು. ಎರಡು ಜಡೆ ಹಾಕೊಳೋವಾಗ ಬೈತಲೆ ಮಾಡ್ಕೊಳ್ಳೋದೇ ಕಷ್ಟ ಅವಳಿಗೆ. ಅಮ್ಮಂಗೆ ಬೆಳಗ್ಗೆದ್ದು ತಲೆತುರಿಸೋಕು ಪುರುಸೊತ್ತಿರಲ್ಲ ಬೆಳಿಗ್ಗೆ ಹೊತ್ತು. ಇನ್ನೊಂದ್ಸಲ ಹೋದಾಗ ಈಶನತ್ರ ಬೈತಲೆ ಮಾಡೋದು ಕಲಿತ್ಕೋ ಅಂತ ಹೇಳಿ ಕಲಿಸಿಯೇ ಬರ್ಬೇಕು, ಹೆಂಗೂ ಅವಂಗೆ ಈ ಥರದ ಕೆಲಸಗಳೆಲ್ಲ ಇಷ್ಟ. ಹುಡ್ಗೀರ ಜಡೆ ಹಿಡ್ಕೊಂಡು ಓಡಾಡೋದು, ಆಗಾಗ ಜಡೆ ಎಳ್ದು ಕೀಟ್ಲೆ ಮಾಡೋದು ಎಲ್ಲವನ್ನೂ ತುಂಬ ಪ್ರೀತಿಯಿಂದ ಮಾಡ್ತಾನೆ ಪೋರ.
ಚಕ್ರಬಯ್ಲಲ್ಲಿ ಸೌತೆಬಳ್ಳಿ ಎಷ್ಟು ಹಬ್ಬಿದೆಯೋ ಎಂತದೊ...ಜೊತೇಲಿ ಶಿಂಡ್ಲೆಕಾಯಿ ಬಳ್ಳಿನೂ ಬೆಳೆದಿರ್ಲಿಕ್ಕೆ ಸಾಕು। ಸೌತೆಮಿಡಿ ಹಾಗೇಯೇ ಕಾಣಿಸೋ ಶಿಂಡ್ಲೆಮಿಡಿ ತಂದು ಆಶಿಗೆ ತಿನ್ಸೋಕೆ ಈಶ ಕಾಯ್ತಿರಬಹುದು. ಪಾಪ॥ಆಶಿಗೆ ಇಂತದ್ದೆಲ್ಲ ಗೊತ್ತಾಗೋದೆ ಇಲ್ಲ, ತಿಂದು ಕಹಿಯಾದ್ಮೆಲೆ ಮೂರುತಾಸು ಕೇಳೋರಿಲ್ದೇ ಇದ್ರೂ ಅಳ್ತಿರ್ತಾಳೆ, ಸುಮ್ನಿರ್ಸೋಕೆ ನಾನೂ ಅಲ್ಲಿ ಇಲ್ಲ ಅನಿಸ್ತು. ಅಲ್ಲಿಗೆ ಹೋದಾಗ ಈಶಂಗೆ ಒಂದಿಷ್ಟು ಬುದ್ಧಿ ಹೇಳಿ ಬರ್ಬೇಕು...ಬುದ್ಧಿ ಅಂದ್ರೆ ಕೆಶವಂದು, ಎಷ್ಟು ಚೊಲೋ ಬುದ್ಧಿ ಅವನದ್ದು. ಅಂವ ಯಾವತ್ತೂ ಯಾರನ್ನೂ ಹಿಂಗೇ ಕಾಡೋದೇ ಇಲ್ಲ. ಅವನಾಯ್ತು, ಅವನ ಓದಾಯ್ತು, ಅಪ್ಪ ಹೇಳಿದ್ ಕೆಲ್ಸವಾಯ್ತು. ಅಪ್ಪನ್ ಜೊತೆ ಒಂದಿಷ್ಟು ವೇದಮಂತ್ರಗಳನ್ನೂ ಕಲಿತ್ಕೊಂಡಿದಾನೆ, ನಾಳೆ ಎಲ್ಲರೀತಿಯಲ್ಲೂಅಪ್ಪಂಗೆ ನೆರವಾದ್ರೆ ಅವನೇ...ಈಶನ್ನ್ ಕರೆದು ರುದ್ರಪಾಠ ಮಾಡೋಕೆ ಅಪ್ಪ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ದೇವರ ಮುಂದೆ ಕೂರ್ತಿದ್ದ ಹಾಗೇ ಈಶನಿಗೆ ಆಕಳಿಕೆ. ಅಪ್ಪ ಕಿವಿಹಿಂಡಿದಷ್ಟೂ ಕೀಲಿ ಕೊಟ್ಟಂಗೆ ಆಕಳಿಸ್ತಿದ್ದ. ಈಶನಷ್ಟು ಪೆಟ್ಟು ತಿಂದವರು ಮನೆಯಲ್ಲಿ ಮತ್ಯಾರೂ ಇಲ್ಲ, ಶತಪುಂಡ. ಮನೆ ಹಿಂದಿನ್ ನೆಲ್ಲಿಬರ್ಲು ಖಾಲಿಯಾಗಿದ್ದೂ ಈಶನ್ನ ಹಿಡಿತದಲ್ಲಿಟ್ಕೊಳ್ಳೋಕೆ..ಆದ್ರೂ ಅಮ್ಮ ಅಷ್ಟೊಂದು ಥಳಿಸ್ಬಾರ್ದು, ಇನ್ನೂ ಹಠಮಾರಿಯಾಗ್ಬಹುದು ಈಶ....ಇನ್ನೂ ಒಂಬತ್ತು ವರ್ಷ, ನಾಳೆ ಸರಿಹೋಗ್ಬಹುದು.
ಕೇಶವಂಗೆ ಈ ವರ್ಷ ಹೈಸ್ಕೂಲು ಮುಗಿದ್ರೆ ಮುಂದಕ್ಕೆ ಕಾಲೇಜಿಗೆ ಹೋಗೋ ಹಂಬಲ ಸಾಕಷ್ಟಿದೆ, ಅಪ್ಪನ್ನ ಕೇಳೋಕೆ ಭಯವಾಗಿ ಮನೆಯಲ್ಲೆ ಇದ್ದು ಅಪ್ಪನಂಗೆ ನಾಳೆ ಊರೂರು ಸುತ್ತೋ ಪುರೋಹಿತ ಆಗೋಕೆ ಇಷ್ಟ ಇಲ್ಲ ಅಂತಿದ್ದ, ಏನ್ಮಾಡ್ತಾನೋ ಏನೋ...ಅಂತೆಲ್ಲ ಯೋಚಿಸೋಷ್ಟ್ರಲ್ಲಿ ಮಳೆ ರಪರಪ ಹೊಯ್ಯತೊಡಗಿತ್ತು। ಆ ಪಕ್ಕದ ಹಂಚೊಂದು ಸರಿದು ಹೋಗಿದ್ದ ಜಾಗದಲ್ಲಿ ನಿಮಿಷದಲ್ಲಿಯೇ ನೀರು ಸೋರಲಾರಂಭಿಸಿತ್ತು. ನೀರುಸೋರಿದಷ್ಟು ಜಾಗ ಬಿಟ್ಟು ಪಕ್ಕದಿಂದ ಗುಡಿಸಿ ಕಸವನ್ನೆಲ್ಲ ಮೂಲೆಯಲ್ಲಿ ಸೇರಿಸಿ ಕೈಯಲ್ಲಿ ಎತ್ತ್ಕೊಂಡೆ. ನುಣುಪು ಧೂಳಿನಂತದ್ದು ಅಲ್ಲೇ ಸ್ವಲ್ಪ ಉಳೀತು, ಒರೆಸೋವಾಗ ಬಟ್ಟೆಯಲ್ಲಿ ಎತ್ತಿದರಾಯ್ತು ಅಂದುಕೊಂಡು ಅಂಗಳಕ್ಕೆ ಹೊರಟೆ. ಮೆಟ್ಟಿಲ ಮೇಲೆ ಬಿದ್ದಿದ್ದ ಮಳೆ ನೀರು ಯೋಚನೆಯಲ್ಲಿ ಕಾಣಿಸದೇ ಕಾಲು ಕೊಂಚ ಜಾರಿದಂಗೆ ಆಯ್ತು. ಮೆಟ್ಟಿಲ ಪಕ್ಕ ಇದ್ದ ಕಲ್ಲುಕಂಬ ಕೈಗೆ ಆಸರೆಯಾಯ್ತು. ಪುಣ್ಯ.... ಕಾಲುಜಾರಿಬೀಳ್ಲಿಲ್ಲವಲ್ಲ ಅಂದ್ಕೊಂಡೆ. ಕಾಲು ಚೂರು ಜುಂ ಜುಂ ಅಂತಿತ್ತು. ಸ್ವಲ್ಪ ಉಳುಕಿದಂಗಾಗಿತ್ತು. ಕಸವನ್ನೆಲ್ಲ ಅಲ್ಲೇ ಪಕ್ಕದ ನಾಗದಾಳಿ ಗಿಡದ ಬುಡಕ್ಕೆ ಸುರುವಿ ಕೈಕೊಡವಿದೆ. ಕೈಗಂಟಿದ ಧೂಳು ಮಳೆಹನಿಯ ಜೊತೆಬೆರೆತು ಕೈಗೇ ಅಂಟಿಕೊಂಡಿತ್ತು. ಮಳೆಸುರೀತಿದೆ ಅನ್ನೋದು ನೆನಪಾಗಿ ಸರಸರನೆ ಒಳಕ್ಕೆ ಬಂದೆ. ಮೆಟ್ಟಿಲು ಹತ್ತೋವಾಗ ಈ ಸಲ ಜಾಸ್ತಿಯೇ ಹುಷಾರಾಗಿದ್ದೆ.
ಬಾಗಿಲು ಸಾರಿಸಿಯಾದ ಮೇಲೆ ರಂಗೋಲೆಗೆ ಚುಕ್ಕಿಯಿಡುವಾಗ ಅಂವ ಹಾಲಿನ ಪಾತ್ರೆ, ನೆನೆಸಿಟ್ಟ ಹಿಂಡಿಯನ್ನೂ ತೆಗೆದುಕೊಂಡು ದನದ ಕೊಟ್ಟಿಗೆಗೆ ಹೊರಟಿದ್ದ। ನೋಡಿದರೂ ನೋಡದಂಗೆ ಪಕ್ಕವೇ ಹಾದು ಹೋದ। ಚುಕ್ಕೆ ಇಡುವುದನ್ನ ಮುಂದುವರೆಸಿದೆ. ಇವತ್ತಿಟ್ಟ ಚುಕ್ಕೆಗಳೆಲ್ಲ ಚಂದ ಕಂಡವು. ಸಾಲಂತೂ ದಿನಕ್ಕಿಂತ ಹೆಚ್ಚೇ ನೇರ ಬಂದಂತೆನಿಸಿತು. ದಿನದಂಗೆ ಸೊಟ್ಟಪಟ್ಟವಾಗಿರಲಿಲ್ಲ. ರಂಗೋಲೆ ಎಳೆ ಎಳೆಯುವತ್ತ ಹೆಚ್ಚು ಗಮನ ಹರಿಸಿದೆ. ಹಾಲುಕರೆದು ಹಿಂದಿರುಗಿ ಬರೋವಾಗ ಅಂವ ನನ್ನ ರಂಗೋಲೆಯನ್ನ ಖಂಡಿತ ನೋಡಬಹುದೆಂಬ ಭರವಸೆ, ಪುಟ್ಟದೊಂದು ಹೊಸ ಆಸೆ. ರಂಗೋಲೆ ಎಳೆದು ಮುಗಿದಾಗ ಬಾಗಿಲಿಂದ ಮೂರು ದಿಕ್ಕಿನಲ್ಲೂಲ್ಲೂ ನಿಂತು ನೋಡಿ ತೃಪ್ತಿಪಟ್ಟು ರಂಗೋಲೆ ಬಟ್ಟಲೆತ್ತಿಕೊಂಡು ಒಳಬರುವಾಗ ಒಳಬಾಗಿಲಲ್ಲಿ ನಿಂತು ಮತ್ತೆ ಹೆಬ್ಬಾಗಿಲ ರಂಗೋಲೆಯನ್ನೆ ದಿಟ್ಟಿಸಬೇಕೆನ್ನಿಸುವಷ್ಟು ಮರುಳುತನ ಈ ಬೆಳಗಿನ ಮನಸಿಗೆ . ರಂಗೋಲೆ ಬಟ್ಟಲಿಟ್ಟು, ಬಾಗಿಲು ಒರೆಸಿದ ಬಕೀಟೊಳಗಿನ ನೀರನ್ನ ಅಂಗಳದಂಚಿನ ಗಟಾರಕ್ಕೆ ಚೆಲ್ಲುವಾಗ ಬೇಸರವಾಯ್ತು. ಉಂತೆ ನೀರು ವ್ಯರ್ಥವಾಯ್ತು, ಬೇಸಿಗೆಯಾಗಿದ್ದರೆ ಅಂಗಳದ ಗಿಡಗಳಿಗಾದರೂ ಉಣಿಸಬಹುದಿತ್ತು ಅನ್ನಿಸದೇ ಇರಲಿಲ್ಲ. ಬಕೀಟು ತಂದು ತೊಳೆದು ಬಚ್ಚಲುಮನೆಯಲ್ಲಿಟ್ಟು, ಒರೆಸುವ ಬಟ್ಟೆಯನ್ನ ತೊಳೆದು ಗಟ್ಟಿಯಾಗಿ ಹಿಂಡಿ ಬಚ್ಚಲುಮನೆಯ ಅ ಗೋಡೆಯ ಹತ್ತಿರದ ಬಟ್ಟೆ ಒಣಗಿಸುವ ಗಣೆಯ ಅಂಚಿಗೆ ಉಡುವ ವಸ್ತ್ರಗಳಿಗೆ ತಾಕದಂತೆ ಒಣಗಿಸಿದೆ. ಉಡುವ ನಿತ್ಯದ ಬಟ್ಟೆಗಳನ್ನೊಮ್ಮೆ ಮುಟ್ಟಿ ನೋಡಿದೆ, ಈ ಮಳೆಗೆ ಬಟ್ಟೆಗಳೆಲ್ಲ ಒಣಗುವುದಕ್ಕೆ ಮೂರುಮೂರುದಿನಗಳಾದರೂ ಬೇಕು ಅನ್ನಿಸಿತು. ಬೆಳಗಿನ ಆಸರಿಗೆ ದೋಸೆಹಿಟ್ಟಿಗೆ ಉಪ್ಪುಹಾಕಿ ಕದಡಿ, ಬಾಳೆಲೆ ಮಡಿಸಿ ಎಣ್ಣೆಚುಟ್ಟಿ ಮಾಡುವಾಗಲೆ ಗೊತ್ತಾಗಿದ್ದು ತೆಳ್ಳೆವ್ವಿನ ಚುಟ್ಟಿಗೂ ಮನೆಯಲ್ಲಿ ಬಾಳೆಲೆ ಮುಗಿದುಹೋಗಿದೆ ಎಂಬುದು. ಇವತ್ತು ಬಟ್ಟಲು ಇಟ್ಟರಾಯ್ತು ಆಸರಿಗೆಗೆ, ಈ ಮಳೆಯಲ್ಲಿ ತೋಟಕ್ಕೆ ಹೋಗಿ ಬಾಳೆಲೆ ತರುವುದು ಕಷ್ಟ ಅಂದುಕೊಂಡೆ. ಚಾ ಪಾತ್ರೆಯಲ್ಲಿಷ್ಟು ನೀರು ಹಾಕಿ ಗ್ಯಾಸ್ ಒಲೆಯಮೇಲಿಟ್ಟೆ. ಯಾಕೋ ಒಲೆ ಉರಿ ಕೆಂಪಗೆ ಕಾಣಿಸಿತು. ಚಳಿಗೆ ಗೋಬರ್ ಗ್ಯಾಸ್ ಡ್ರಮ್ ಏನಾದ್ರೂ ಇಳಿದುಹೋಯ್ತಾ’ ಅಂತ ಸಂಶಯ ಬಂದು ಹೋಗಿ ನೋಡ್ಕೊಂಡು ಬಂದೆ , ಹಾಗೇನೂ ಆಗಿರ್ಲಿಲ್ಲ, ಡ್ರಮ್ ಮುಂದೆ ನಿಂತು ನೋಡಿದಾಗ ಭುಜದಮಟ್ಟಕ್ಕೆ ಡ್ರಮ್ ಮೇಲಕ್ಕೇರಿತ್ತು. ಸಮಾಧಾನವಾಗಿ ಅಡುಗೆ ಮನೆಗೆ ಬರುವಾಗ ಬಚ್ಚಲೊಲೆಯಲ್ಲಿ ಕಟ್ಟಿಗೆಗಳು ಹಸಿಯಾರಿ ಧಗ ಧಗ ಉರಿಯುತ್ತಿದ್ದವು. ಹಂಡೆಯ ನೀರು ಬಿಸಿಯುಗಿ ಉಗುಳುತ್ತಿತ್ತು. ಈಗಲೆ ಸ್ನಾನ ಮಾಡಿಬಿಡಬೇಕು ಅನ್ನಿಸಿತು. ಅಂಗಳವನ್ನೊಂಚೂರು ಗುಡಿಸದೇ ಈಗಲೆ ಸ್ನಾನ ಮಾಡುವುದು ಸರಿಯಲ್ಲವೆನಿಸಿತು. ಅಲ್ಲದೇ ಬೆಳಗ್ಗೆದ್ದು ಸ್ನಾನ ಮಾಡಿ ಕೂರುವುದಕ್ಕೆ ಇದೇನು ಅಪ್ಪನಮನೆಯಾ....ಈಗ ಸ್ನಾನಕ್ಕೆ ಹೋದ್ರೆ ಅಂವ ಈಗ ಬಂದ್ರೆ ಆಸರಿಗೆ ಮಾಡಿ ಹಾಕುವವರು ಯಾರು ಅಂತ ಪ್ರಬುದ್ಧಳ ಹಾಗೆ ಯೋಚಿಸುತ್ತ ಅಡುಗೆ ಮನೆ ಹೊಕ್ಕಾಗ ಪಾತ್ರೆಯೊಳಗಿನ ನೀರು ಕುದಿಯತೊಡಗಿತ್ತು. ಅಂವ ಇನ್ನು ಹಾಲುತಂದು ಅದನ್ನ ನಾ ಕಾಯಿಸಿ ಚಹಕ್ಕೆ ಹಾಕುವುದೆಷ್ಟೊತ್ತಿಗೋ ಅಂತ ಯೋಚಿಸುತ್ತ ಕುದಿಯುವ ನೀರಿಗೆ ಎರಡು ಚಮಚ ಚಹ ಪುಡಿ ಸುರಿದೆ. ಚಹದಪುಡಿ ನೀರೊಳಗೆ ಹರಡಿಕೊಂಡು ಉಂಡುಂಡೆಯಾಗಿ ಒಡೆಯುತ್ತ ನೀರಿನೊಂದಿಗೆ ಕುದಿಯತೊಡಗಿತು. ಅಂವ ಬರುವುದು ತಡವಿದ್ದರೆ ಮಜ್ಜಿಗೆ ಕಡೆದುಬಿಡಬಹುದಾಗಿತ್ತು ಅಂದುಕೊಳ್ಳುವಷ್ಟರಲ್ಲಿ ಬಿಳಿನೊರೆತುಂಬಿದ ಹಾಲಿನಪಾತ್ರೆ ಹಿಡಿದು ಅಂವ ಒಳಗೆ ಬರುತ್ತಲಿದ್ದ. ಹಾಲಿನ ಪಾತ್ರೆಯೂ ತುಂಬಿ, ಹಾಲುಕರೆಯುವ ಗಿಂಡಿಯೂ ತುಂಬಿತ್ತು. ಒಂದುಕೈಯಲ್ಲಿ ಹಾಲುತುಂಬಿದಪಾತ್ರೆ, ಇನ್ನೊಂದು ಕೈಯ್ಯಲ್ಲಿ ತುಂಬಿದ ಗಿಂಡಿ ಹಿಡಿದು ಹಾಲುಚೆಲ್ಲದ ಹಾಗೆ ನಿಧಾನಕ್ಕೆ ಒಳಬರುತ್ತ ಇವತ್ತು ಆಕಳು ಸ್ವಲ್ಪ ಜಾಸ್ತಿಯೇ ಹಾಲುಕೊಡ್ತು ಅಂದವನ ಕೈಯಿಂದ ಹಾಲಿನ ಪಾತ್ರೆ ತಗೊಂಡೆ. ನಿನ್ನೆಯ ತನಕ ನಡೆದದ್ದು ಅವನಿಗೆ ನೆನಪೇ ಇಲ್ಲದಂಗಿತ್ತು, ನಾನು ಮರೆತಹಾಗಿದ್ದೆ.
‘ಮುಗಿದಿಲ್ಲ’ ಅಂತ ಹೇಳಿದ್ದೆ, ಆದರೆ ಮುಗಿಸಿದ್ದೇನೆ.
ಹೊಸ ಕದಿರು
ಸಂಜೆಹೊತ್ತಲೆಲ್ಲ ಒಬ್ಳೇ ಕೂತಿರ್ತಿದ್ದೆ ಮನೆ ಮುಂದಿನ ಮೆಟ್ಲ ಮೇಲೆ। ಹೀಗೆ ಒಂದಿನ ಕೂತಿದ್ದಾಗ ಅತ್ತೆಮ್ಮ ಬಂದು ಹೇಳಿದ್ರು. ‘ಅಲ್ ನೋಡ್ ತಾಯೀ....ಆ ರಸ್ತೆ ತಿರುವಿನ್ ಬಲಕ್ಕೆ ಹಲ್ಸಿನ್ ಮರ ಕಾಣ್ತಾ....ಅದು ನಮ್ಮನೆ ತ್ವಾಟದ್ ಗಡಿ. ಹಂಗೇ ಅಲ್ಲಿಂದ ಹದಿನಾರು ಬಣ್ಣನೂ ನಮ್ದೇ ತ್ವಾಟ. ಅದೇ ರಸ್ತೆಗುಂಟ ಮುಂದ್ಕ್ ಹೋದ್ರೆ ನಮ್ಮನೆ ಗದ್ದೇನೂ ಸಿಗ್ತದೆ. ಒಂದಿನ್ ಹೋಗ್ಬರುವ ಬಿಡು’ ಅಂದಿದ್ರು. ಸ್ವಲ್ಪ ಹೊತ್ತು ಅಲ್ಲೇ ಸುಮ್ಮನೆ ಕೂತಿದ್ರು. ನಾನು ಹುಟ್ಟಾ ಒಂಟಿ. ಒಂಟಿಗೂಬೆ. ಹೀಗೆ ಒಬ್ಬಳೆ ಕೂತ್ಕೊಳ್ಳೋದು ನಂಗೆ ಹೊಸತಲ್ಲ. ಮನಸಿದ್ರೆ ಮಳೆಹೊಯ್ದಂಗೆ ಮಾತಾಡಿ ಸುಮ್ನಾಗಿಬಿಡ್ತೀನಿ. ಪಾಪ॥ಅತ್ತೇಗೂ ನನ್ ಜೊತೆ ಈ ಗ್ರಹಚಾರ ಅಂಟಿಕೊಂಡ್ತಾ ಅಂತ ಯೋಚಿಸ್ತಿರೋವಾಗ ಅತ್ತೆ ಎದ್ದು ಹೋಗಿದ್ದು ಗೊತ್ತಾಗ್ಲೇ ಇಲ್ಲ. ಮಳೆ ಜಿಮುರ್ತಾ ಇತ್ತು. ರಸ್ತೆಬಲಗಡೆ ತಿರುವಲ್ಲಿ ನಿಂತಿರೋ ನೀರು ಕಲಕಿದಂತೆ ಸದ್ದಾಗಿ ನೋಡ್ದೆ. ಅಂವ ಆ ನಿಂತಿರೋ ನೀರಲ್ಲಿ ಪಾದ ಇಳಿಬಿಟ್ಟು ಪಚ ಪಚ ಸದ್ದು ಮಾಡ್ತಾ ಇದ್ದ ಮಗು ಹಾಗೆ. ಅಂವ ಮೆಟ್ಟಿಲಲ್ಲಿ ಕೂತ ನನ್ನ ನೋಡಿದಂಗೆ ಇರ್ಲಿಲ್ಲ. ನೀರಲ್ಲೇ ಒಂದೊಂದೇ ಹೆಜ್ಜೆ ಮುಂದೆ ಇಡ್ತಾ ಬಂದವನು ತಲೆ ಎತ್ತಿದ. ನಾನು ಅವನ ನೀರಾಟ ನೋಡಿದ್ದು ಅವಂಗೆ ಕೊಂಚ ನಾಚ್ಕೆ ಆಗಿರ್ಬೇಕು. ನನ್ನ ನೋಡಿ ಮುಗುಳ್ನಕ್ಕ. ಮೈಯಲ್ಲಿ ಹೆಂಗೆಂಗೋ ಆಗೋಯ್ತು. ಆವತ್ತೇ ಮೊದ್ಲು ಅಂವ ನನ್ನ ನೋಡಿ ನಕ್ಕಿದ್ದು. ಪ್ರತಿನಗೋಕೂ ಗೊತ್ತಾಗ್ಲಿಲ್ಲ ಭಯ, ನಾಚ್ಕೆ ಎಲ್ಲಾ ಸೇರಿ ಎದ್ದು ಒಳಗೆ ಬಂದ್ಬಿಟ್ಟೆ. ಸುಧಾರಿಸ್ಕೊಳ್ಳೋಕೆ ಇಡೀ ದಿನ ಬೇಕಾಯ್ತು. ಅಂವ ಬರೀ ನಕ್ಕಿದ್ದಕ್ಕೇ ಹಿಂಗೆಲ್ಲ ಆಗೋಯ್ತು. ಅಕ್ಕಿ ತೊಳ್ದು ನೀರನ್ನ ಅಕ್ಕಚ್ಚಿನ್ ಪಾತ್ರೆಗೆ ಸುರುವೋಕೆ ಹೋದಾಗ್ಲೂ ಕಣ್ಣಲ್ಲಿ ಅಂವ ನಗ್ತಾನೇ ಇದ್ದ. ಮನಸೆಲ್ಲ ತುಂಬೋಗಿದ್ದ. ಬಗ್ಗಿ ನೀರನ್ನ ಅಕ್ಕಚ್ಚಿನ್ ಪಾತ್ರೆಗೆ ಸುರುವ್ತಾ ಇದ್ದಂಗೆ ಸೆರಗೊಳಗಿಂದ ಜಾರಿದ ತಾಳಿಸರ ಅಕ್ಕಿಪಾತ್ರೆಗೆ ಟಣಕ್ ಅಂತ ತಗುಲ್ತು. ಮತ್ತೆ ಅಂವ ನೆನಪಾದ. ಈ ತಾಳಿಕಟ್ಟಿದ್ದು ಅಂವ..ಅಂವ ನನ್ ಗಂಡ. ನನ್ನವನು...ಯೋಚಿಸ್ದಂಗೇ ಮೈಯ್ಯೊಳಗೆಲ್ಲ ಅವನೇ ಹರಿದು ಹೋದ. ಆವತ್ತೆಲ್ಲ ಏನೇ ಕೆಲ್ಸ ಮಾಡೋಕೆ ಹೋದ್ರೂ ಅಂವ ಪಕ್ಕ ಬಂದು ನಿಂತಹಾಗೆ ಅನಿಸ್ತು.
ಇದ್ದಕ್ಕಿದ್ದಂಗೆ ಒಂದಿನ ಅತ್ತೆಮ್ಮ ಒಂದುತಿಂಗಳು ಅಕ್ಕತಂಗಿ ಅಣ್ಣ್-ತಮ್ಮಂದಿರ್ ಮನೆ ಎಲ್ಲ ಸುತ್ತಾಡ್ಕೊಂಡು ಬರೋಣಾಂತಿದೀನಿ, ದಿನಾ ದೇವ್ರ ಪೂಜೆ ಮಾಡೋಕೆ ನನ್ ಮಗಂಗೆ ನೆನಪ್ಸು ತಾಯೀ॥ಮರೀಬೇಡ...’ ಅಂತ ಹೇಳಿ ಚೀಲ ತಗೊಂಡು ಹೊರಟುಬಿಟ್ಟಿದ್ರು। ಅತ್ತೆಮ್ಮ ಹೋದ್ಮೆಲೆ ತೀರಾ ಒಂಟಿ ಅನಿಸ್ತು. ಮೊದಲಬಾರಿಗೆ ಇದು ನನ್ ಮನೆ ಅಲ್ಲ ಅನಿಸ್ತು. ಅಡುಗೆ ಎಲ್ಲ ಮಾಡಿಟ್ಟು ಅಂವ ಬರೋಹಾದಿಯನ್ನ ಕಾಯ್ತಾ ಕೂತಿದ್ದೆ. ಮಧ್ಯಾಹ್ನ ಬಂದ. ‘ದೇವ್ರಪೂಜೆ ಮಾಡ್ಬೇಕಂತೆ, ಅತ್ತೆಮ್ಮ ಹೇಳಿದ್ರು’ ಅಂದೆ. ಮೊದಲಬಾರಿಗೆ ಅವನ ಹತ್ರ ಮಾತಾಡೋ ಸಂದರ್ಭ, ಅನಿವಾರ್ಯತೆ ಎಲ್ಲ ಒದಗಿ ಬಂದಿತ್ತು. ಮಾತಾಡ್ದೇ ಸ್ನಾನ ಮಾಡಿ ಬಂದವನು ದೇವರ ಪೂಜೆ ಮಾಡಿ ಊಟಕ್ಕೆ ಬಂದ. ಅವಂಗೆ ಊಟ ಬಡ್ಸಿ ನಾನು ಸುಮ್ನೆ ನಿಂತಿದ್ದೆ. ಊಟಮಾಡಿ ಎದ್ದುಹೋದ. ಆಮೇಲೆ ನಾನೂ ಊಟಮಾಡ್ದೆ. ಬಚ್ಚಲಒಲೆ ಹೊಗೆ ಅಡುಗೆ ಮನೆಗೂ ನುಸುಳಿ ಕಣ್ಣಲ್ಲಿ ನೀರುಬಂತು. ಹೊರಗೆ ಮಳೆ ತನಗ್ಯಾರದ್ದೂ ಹಂಗಿಲ್ಲ , ಬೇಕಾದಾಗ ಸುರಿತೀನಿ’ ಅನ್ನೋಥರ ಸುರೀತಾನೇ ಇತ್ತು. ಹದಿನೈದು ದಿನ ಆಗೋಷ್ಟ್ರಲ್ಲಿ ಈ ದಿನಚರಿ ಹೊಸದಾಗಿ ಉಳೀಲಿಲ್ಲ, ಅಭ್ಯಾಸವಾಗಿ ಹೋಯ್ತು. ದಿನ ಕಳೆದಂಗೆ ಅಂವ ಊಟಕ್ಕೆ ಕೂತಾಗ ಅವನನ್ನ ಮಾತಾಡ್ಸೋಣ ಅನ್ನೋ ಹಂಬಲ ಹೆಚ್ಚಾದ್ರೂ ಯಾಕೋ ಯಾವ್ದೋ ಅಳಲು ಅವನನ್ನ ಮಾತಾಡ್ಸೋಕೆ ಹಿಂದೇಟು ಹಾಕ್ತಾ ಇತ್ತು. ಹೀಗೆ ತಾಳಿಕಟ್ಟಿದ್ ಹೆಣ್ಣನ್ನ ಸತಾಯಿಸ್ತಾನಲ್ಲ, ಅಂವ ಮನುಷ್ಯನೇ ಅಲ್ಲ ಅನ್ನೋ ಭಾವ ಕಾಡೋಕೆ ಶುರುವಾಗಿತ್ತು ಆಗಲೇ. ಈ ಭಾಗ್ಯಕ್ಕೆ ಮದುವೆನಾದ್ರೂ ಬೇಡ ಅಂತ ಸುಮ್ನಿದ್ದಿದ್ರೆ ಆಗ್ತಿರಲಿಲ್ವಾ ಇವಂಗೆ, ನನ್ ಗ್ರಹಚಾರಕ್ಕೆ ನಾನೇ ಇವನ ತಾಳಿಗೆ ಕುತ್ತಿಗೆ ಒಡ್ಡೋ ಹಾಗೆ ಆಯ್ತಲ್ಲ ಅಂತ ಅಳಲಳಲು ಬಂತು. ಅವನ ಇರುವು ಕೋಪ ಬರಿಸ್ತಿತ್ತು. ದುಃಖ ತರಿಸ್ತಿತ್ತು.ನನ್ನೊಳಗಿನ ಅವನ ಮೇಲಿನ ಹೊಸರಾಗ ಕರಗ್ತಿದೆ, ಅಲ್ಲಿ ಧ್ವೇಷ ಮೊಳಕೆಯೊಡೀತಾ ಇದೆ ಅನ್ನಿಸೋಕೆ ಶುರುವಾಯ್ತು.
ದಿನಾ ಮಧ್ಯಾಹ್ನ ಊಟಕ್ಕೆ ಬರ್ತಿದ್ದೋನು ಆವತ್ತು ಮಧ್ಯಾಹ್ನ ಮನೆಗೆ ಬರಲೆ ಇಲ್ಲ। ಕಾದು ಕಾದು ಸಾಕಾಗಿ ದೇವರಮುಂದೆ ತುಪ್ಪದ ದೀಪ ಹಚ್ಚಿಟ್ಟು, ಊಟ ಮಾಡ್ದೆ। ರಾತ್ರಿನೂ ಆಯ್ತು। ಕಾದು ಕಾದು ಸುಸ್ತಾಗಿ ಅಲ್ಲೇ ಮಲ್ಕೊಂಡಿದ್ದವಳಿಗೆ ನಿದ್ರೆ ಬಂದಿತ್ತು। ಯಾರೋ ಹೆಬ್ಬಾಗಿಲನ್ನ ತೆರೆದ ಸದ್ದಿಗೆ ಎಚ್ಚರವಾಯ್ತು। ಎದ್ದಾಗ ಕರೆಂಟ್ ಇರ್ಲಿಲ್ಲ। ದೇವರ ಮುಂದಿನ್ ದೀಪ ಬೆಳಗ್ತಾ ಇತ್ತು। ಆ ಮಸುಕುಬೆಳಕಲ್ಲಿ ಒಳಗಡಿಯಿಟ್ಟವನು ಅವನೇ ಅಂತ ಗೊತ್ತಾಗಿ ಸಮಾಧಾನವಾಯ್ತು। ಬಂದವನೇ ರೂಮು ಹೊಕ್ಕ। ಗಂಟೆ ನೋಡಿದ್ರೆ ರಾತ್ರಿ ಹನ್ನೊಂದು। ನಾನೂ ಊಟ ಮಾಡ್ದೇ ಇದ್ದಿದ್ದು ತುಂಬಾನೇ ಹಸಿವಾಗ್ತಾ ಇತ್ತು। ನಿಧಾನಕ್ಕೆ ಎದ್ದು ಮೇಣದಬತ್ತಿಯೊಂದನ್ನ ಹೊತ್ತಿಸಿಕೊಂಡು ಕತ್ತಲಲ್ಲಿ ಗಂಟೆ ನೋಡಿದ್ರಿಂದ ಹನ್ನೊಂದು ಗಂಟೆ ಹಾಗೆ ಅನ್ನಿಸಿರ್ಬಹುದೇನೋ ಅಂತ ಇನ್ನೊಂದ್ಸಲ ಮೇಣದಬತ್ತಿ ಬೆಳಕಲ್ಲಿ ಗಂಟೆ ನೋಡ್ದೆ। ಹಾಗೇ ನಿಧಾನಕ್ಕೆ ರೂಮಿನ ಬಾಗಿಲುತನಕ ಹೋಗಿ ‘ಊಟ ಮಾಡೋಲ್ವ?’ ಅಂತ ಕೆಳ್ದೆ। ‘ಬೇಡ’ ಅಂದ। ‘ನಂಗೆ ಹಸಿವಾಗ್ತಿದೆ, ಊಟಮಾಡೋಣ್ವ?’ ಅಂದೆ ‘ನೀನ್ ಊಟಮಾಡು’ ಅಂದ। ಯಾಕೋ ಊಟ ಬೇಡ ಅನಿಸ್ತು। ಅಡುಗೆ ಮನೆಗೆ ಬಂದು ಪಾತ್ರೆಗಳನ್ನೆಲ್ಲ ಎತ್ತಿಟ್ಟು ರೂಮೊಳಗೆ ಬಂದೆ। ರೂಮಲ್ಲಿ ಎಂತದೊ ವಾಸನೆ ಬರ್ತಾ ಇತ್ತು. ಡ್ರಿಂಕ್ ಮಾಡಿದಾನೆ ಅನಿಸ್ತು. ಮೇಣದ ಬತ್ತಿಯನ್ನ ನಿಧಾನಕ್ಕೆ ಅವನ ಮುಖ ಕಾಣುವ ರೀತಿಯಲ್ಲಿ ಹಿಡಕೊಂಡೆ. ಈ ಮಳೆಚಳಿಯಲ್ಲೂ ಅವನ ಮುಖ ಬೆವರಿತ್ತು. ನಿರಾಳವಾಗಿ ಮಲಗಿದ್ದ. ಮೇಣದಬತ್ತಿಯನ್ನ ಆರಿಸೋಕೆ ಭಯವಾಗಿ ರೂಮಿನ ಮೂಲೆಯ ಟೇಬಲ್ ಮೇಲೆ ಅಂಟಿಸಿ ಮಂಚದ ತುದಿಗೆ ಅವಗೆ ಬೆನ್ನು ಹಾಕಿ ಮಲಕೊಂಡೆ. ಒಂದೇ ಮಂಚ ಒಂದಿನವೂ ಒಂದುಗೂಡಿಸದ್ದು ನೆನದು ನಗು ಬಂತು. ಒಳಗೆ ಉರೀತೀರೋ ತುಮುಲುಗಳ ಹೊರಗೆ ಮೇಣದಬತ್ತಿ ಸಣ್ಣಗೆ ಉರಿತಾ ಇತ್ತು. ಇನ್ನೇನು ಆರಿಹೋಗ್ತಿದೆಯೇನೋ ಅನ್ನುವ ಹಾಗೆ ಉರೀತಾ ಇತ್ತು. ಮಂದಬೆಳಕು ಒಳಗಿನ ಯೋಚನೆಗಳಿಗೆ ಉರುವಲಾದಂಗಿತ್ತು. ನಿಧಾನಕ್ಕೆ ಹೊರಳಿದವನ ಕೈ ಥಟ್ಟನೆ ಸೊಂಟದ ಮೇಲೆ ಬಿದ್ದಾಗಲೆ ಯೋಚನೆಯಿಂದಾಚೆ ಬಂದಿದ್ದು. ಮೈಯೆಲ್ಲ ಸಣ್ಣಗೆ ಬೆವರಲು ಶುರುವಾಯ್ತು. ಅವಗೆ ನಿದ್ರೆ ಬಂದಿರಲಿಲ್ಲ! ಆಸರೆಯಾಗಬೇಕಾದ್ದು ಆಕ್ರಮಣವಾಗಿತ್ತು. ಪ್ರೀತಿಯಿಂದಾಗಬೇಕಾದ್ದು ಅಮಲಿನಲ್ಲಾಗತೊಡಗಿತ್ತು. ತಪ್ಪಿಸಿಕೊಳ್ಳೋಕೆ ಪ್ರಯತ್ನಿಸಿದವಳಿಗೆ ಯಾಕೋ ಮನಸಾಗಲಿಲ್ಲ. ಹೆಣ್ತನ ಎಚ್ಚರಗೊಂಡು ಅಂವ ಗಂಡ ಅನ್ನೋದು ನೆನಪಿಗೆ ಬಂದು ಸುಮ್ಮನಿದ್ದುಬಿಟ್ಟಿದ್ದೆ. ಬೆಳಗ್ಗೆದ್ದಾಗ ಕಿಟಕಿಯಿಂದ ಬೆಳಕು ಮೈಮೇಲೆ ಬಿದ್ದಿದ್ದು ಅರಿವಾಗಿತ್ತು. ತುಸು ಹೆಚ್ಚೇ ನಿದ್ರಿಸಿದ್ದೆ. ಮೂಲೆಯ ಟೇಬಲ್ ಮೇಲಿನ ಮೇಣದಬತ್ತಿ ಬತ್ತಿ ಪೂರ್ತಿ ಉರಿದು ಮೇಣ ಕರಗಿ ಸುತ್ತೆಲ್ಲ ಹರವಿಕೊಂಡಿತ್ತು. ಎದ್ದು ಬಂದು ಮುಖ ತೊಳ್ದು ಬಾಗಿಲಿಗೆ ನೀರು ಹಾಕೋಣ ಅಂತ ಯೋಚಿಸಿದವಳಿಗೆ ‘ಪಾಪ, ಅಂವ ಈಗ ಎದ್ದು ಬಂದ್ರೆ ಈ ಚಳೀಲಿ ತಣ್ಣೀರಲ್ಲಿ ಮುಖ ತೋಳೇಯೋ ಹಾಗೆ ಆಗ್ಬಾರ್ದು’ ಅಂತ ಅನ್ನಿಸ್ತು। ಬಚ್ಚಲುಒಲೆಗೆ ಬೆಂಕಿ ಮಾಡಿ ಬಕೀಟಲ್ಲಿ ನೀರು ತೂಂಬ್ಕೊಂಡು ಬಾಗಿಲು ಒರೆಸೋ ಹಳೇ ಬಟ್ಟೆತುಂಡನ್ನೂ ಎತ್ಕೊಂಡು ಹೆಬ್ಬಾಗಿಲ ಕಡೆ ನಡ್ದೆ.
ಕಥೆ ಮುಂದುವರಿಯುತ್ತದೆ.
ಇದು ನನ್ನ ಬ್ಲಾಗ್ ನ ನೂರನೆಯ ಬರಹ.
ವಿಚಿತ್ರಾನ್ನ ಸವಿಯುವಾಗ ಹೀಗೆನಿಸುತ್ತದೆ...
ಜೋಶಿಯವರು ಉತ್ಸಾಹದ ಚಿಲುಮೆಯಂತೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಅನಿವಾಸಿ ಕನ್ನಡಿಗರಿಗೂ ಸಹ ಸುಲುಭ ಲಭ್ಯವಾದ ಅತ್ಮೀಯಇ-ಪತ್ರಿಕೆಯಾದ ದಟ್ಸ್ ಕನ್ನಡದಲ್ಲಿ ‘ವಿಚಿತ್ರಾನ್ನ’ಪಾತ್ರೆಯ ಒಡೆಯರಾಗಿಯೂ, ನಮ್ಮ ನಿಮ್ಮೆಲ್ಲರ ನೆಚ್ಚಿನ ದಿನಪತ್ರಿಕೆಗಳಲ್ಲೊಂದಾದ ವಿಜಯ ಕರ್ನಾಟಕದ ‘ಪರಾಗ ಸ್ಪರ್ಶ’ ಅಂಕಣದ ಯಜಮಾನರಾಗಿಯೂ ಜೋಶಿಯವರು ಚಿರಪರಿಚಿತರು. ಸಹನಾಮಯಿಯಾದ ಜೋಶಿಯವರು ಸಹನಾಮಯಿ ಸಹಾನಾರವರ ಮನದೊಡೆಯರು ಸಹ. ಸೃಜನಶೀಲರಾದ ಇವರು ಸೃಜನ್ ಅವರ ಪಿತೃದೇವ ಹಾಗೂ ನಮ್ಮಂಥ ಅನೇಕಾನೇಕ ಓದುಗರ ಅಭಿಮಾನಕ್ಕೆ ಪಾತ್ರರಾದವರು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿಯಲ್ಲಿದ್ದೂ ‘ವಿಚಿತ್ರಾನ್ನ’ವನ್ನು ಸತತ ಐದುವರ್ಷಗಳಕಾಲ ಪ್ರತಿಮಂಗಳವಾರ ದಟ್ಸ್ ಕನ್ನಡ ಓದುಗರಿಗೆ ಉಣಬಡಿಸಿ ‘ವಿಚಿತ್ರಾನ್ನದಾತಾ ಸುಖೀಭವ’ ಎನಿಸಿಕೊಂಡವರು. ಕಂಪ್ಯೂಟರಿನ ಹಾಳೆಗಳಲ್ಲಿ ಮಾತ್ರ ಲಭ್ಯವಾಗಿದ್ದ ‘ವಿಚಿತ್ರಾನ್ನ’ ಇದೀಗ ಪುಸ್ತಕ ರೂಪದಲ್ಲಿಯೂ ಲಭ್ಯವಿರುವುದು ನಮ್ಮೆಲ್ಲರ ಭಾಗ್ಯ. ‘ಮತ್ತೊಂದಿಷ್ಟು ವಿಚಿತ್ರಾನ್ನ’ಮತ್ತು ‘ಇನ್ನೊಂದಿಷ್ಟು ವಿಚಿತ್ರಾನ್ನ’ಒಂದಾದ ಮೇಲೆ ಒಂದನ್ನು ಸವಿಯಬಹುದಾದ ಬುತ್ತಿಯನ್ನದ ಎರಡು ಪಾತ್ರೆಗಳು.
‘ವಿಚಿತ್ರಾನ್ನ’ವನ್ನು ದಿನಕ್ಕೊಂದು ಕಥೆಯಂತೆ ಓದುತ್ತಿರುತ್ತೇನೆ. ಇವು ನೀತಿಕಥೆಗಳ ಹಾಗಿರದಿದ್ದರೂ ಮಾಹಿತಿಕತೆಗಳಂತೆ ವಿಜೃಂಭಿಸುತ್ತವೆ. ಹೀಗೇ ಕುಳಿತಿದ್ದಾಗ ಹಸಿವಾದರೆ ಕೆಲವೊಮ್ಮೆ ನನ್ನಿಷ್ಟದ ಖಾದ್ಯವಾದ ಚಿತ್ರಾನ್ನದ ನೆನಪಾದಾಗ ಚಿತ್ರಾನ್ನವನ್ನ ಪಾಕಿಸಿ ತಿನ್ನಲು ಸೋಮಾರಿಯಾಗಿ ಕುಳಿತಾಗಲೂ ಜೋಶಿಯವರ ‘ವಿಚಿತ್ರಾನ್ನ’ವೇ ನನ್ನ ಸಹಾಯಕ್ಕೆ ಬರುವುದು. ನವಿರು ಹಾಸ್ಯ ಚಟಾಕಿಗಳನ್ನೊಳಗೊಂಡ ಜೋಶಿಯವರ ಲೇಖನಗಳು ತುಂಬು ಲವಲವಿಕೆಯಿಂದ ಸಾಗುತ್ತ ಮಾಹಿತಿ ಒದಗಿಸುತ್ತ ಹೋಗುವ ರೀತಿ ಓದುಗರನ್ನು ಸಂತೃಪ್ತಗೊಳಿಸುತ್ತದೆ. ಕೆಲವೆಡೆ ವಿಚಿತ್ರಾನ್ನ ತನ್ನದೇ ಪರಿಮಳವನ್ನು ಹೊಂದಿದ ರುಚಿಯಾದ ಗಂಜಿಯಷ್ಟು ಸರಳವಾಗಿಯೂ ನಮ್ಮನ್ನು ತಂಪಾಗಿಸುತ್ತದೆ. ಇನ್ನು ಕೆಲವೆಡೆ ಬಂಗಾರಬಣ್ಣಕೆ ಹುರಿದ ಕಡಲೆಬೇಳೆ ಎನ್ನಿಸಿದರೂ ಸ್ವಲ್ಪ ಅಗಿದು ತಿನ್ನುವವರಿಗೆ ಅದರ ಸ್ವಾದದ ಹಿತವೇ ಬೇರೆ. ‘ವಿಚಿತ್ರಾನ್ನ’ ಬರಿಯ ಒಗ್ಗರಣೆ ಅನ್ನವಾಗಿ ಯಾವತ್ತೂ ಅನ್ನಿಸುವುದೇ ಇಲ್ಲ. ಬೇರೆ ಬೇರೆ ಪ್ರದೇಶಗಳ, ರಾಜ್ಯಗಳ, ನಾಡುಗಳ, ಗ್ರಹಗಳಿಂದ ತಂದ ಉತ್ತಮ ಖಾದ್ಯ ಸಲಕರಣೆ(ವಿಷಯ)ಗಳನ್ನೆಲ್ಲ ಬಳಸಿ ತಯಾರಾದ ಪೌಷ್ಟಿಕ ಖಾದ್ಯವಾಗಿ ಪರಿಣಾಮ ಬೀರುತ್ತದೆ .
‘ವಿಚಿತ್ರಾನ್ನ’ ಪುಸ್ತಕ ರೂಪದಲ್ಲಿ ಲಭ್ಯವಿರುವ ವಿಚಾರಕ್ಕೆ ಶ್ರೀವತ್ಸ ಜೋಶಿಯವರನ್ನು ಅಭಿನಂದಿಸುವ ಮೊದಲಿಗೆ ‘ವಿಚಿತ್ರಾನ್ನ’ವನ್ನು ಪುಸ್ತಕರೂಪದಲ್ಲಿಯೂ ಹಾಗೂ ಇ ರೂಪದಲ್ಲಿಯೂ ನಮ್ಮ ಕೈಗೆಟಕುವಂತೆ ಅನುಗ್ರಹಿಸಿರುವದಕ್ಕಾಗಿ ಧನ್ಯವಾದ ಹೇಳಲೇಬೇಕು. ‘ವಿಚಿತ್ರಾನ್ನ’ಪುಸ್ತಕರೂಪದಲ್ಲಿ ಲಭ್ಯವಿರುವಂಥಹ ಸಿಹಿಸುದ್ದಿಯು ಈಗಾಗಲೇ ನಮಗೆಲ್ಲ ಗೊತ್ತಿರುವಂತದ್ದೇ. ಪುಸ್ತಕ ರೂಪದಲ್ಲಿ ‘ವಿಚಿತ್ರಾನ್ನ’ಲಭ್ಯವಿರುವುದರಿಂದ ಬೇಕಾದ ತಾಣದಲ್ಲಿ ಕುಳಿತು ಅಥವಾ ನಿಂತು ಅದರ ಸವಿಯನ್ನು ಸವಿಯಬಹುದಾಗಿದೆ. ‘ವಿಚಿತ್ರಾನ್ನ’ ಪುಸ್ತಕ ಲಭ್ಯವಿದೆಯಾ, ಹಾಗಾದರೆ ಇವತ್ತೇ ಕೊಂಡುತಂದು ಆರಾಮವಾಗಿ ಮಲಗಿಕೊಂಡು ಓದಿಬಿಡುತ್ತೇನೆ’ ಅಂತ ಮಲಗಿಕೊಂಡು ‘ವಿಚಿತ್ರಾನ್ನ’ ಸವಿಯುವಾಗ ಗಂಟಲಲ್ಲಿ ಸಿಕ್ಕೀತಾದರೆ ನನ್ನನ್ನು ನೀವು ಬೈದಲ್ಲಿ ಅದಕ್ಕೆ ನಾನು ಜವಾಬ್ಧಾರಳಲ್ಲ. ವಿಚಿತ್ರಾನ್ನವು ತದೇಕಚಿತ್ತರಾಗಿ ಕುಳಿತು ಓದುವವರ ಮಿದುಳನ್ನೂ ಮನಸನ್ನೂ ತುಂಬಿಸಿ ಹಸಿವೆಯನ್ನು ಮರೆಸಬಲ್ಲಂತಹುದಾಗಿದೆಯೇ ಹೊರತು ಆಲಸಿಯಾಗಿ ಮಲಗಿ ನಿದ್ರೆತಂದುಕೊಳ್ಳುವುದಕ್ಕಾಗಿ ಓದುವ ಪುಟಗಳನ್ನು ಹೊಂದಿಲ್ಲ. ಅರ್ಥೈಸಿಕೊಳ್ಳುವಂಥಹ, ಆಳವಡಿಸಿಕೊಳ್ಳುವಂಥಹ ವಿಚಾರಧಾರೆಗಳಿಗಿಲ್ಲಿ ಖಂಡಿತ ಕೊರತೆಯಿಲ್ಲ. ಪರಧ್ಯಾನತೆಯಿಂದ ಓದಿದರೂ ಅರ್ಥವಾಗಿಬಿಡುವಂತೆ ಹೆಣೆದ ದಿಢೀರ್ ಇಷ್ಟವಾಗುವ ಕಥೆಪುಸ್ತಕ ‘ವಿಚಿತ್ರಾನ್ನ’ಅಲ್ಲವೆನ್ನುವುದೂ ಅಷ್ಟೇ ಸತ್ಯ. ಓದುತ್ತ ಓದುತ್ತ ಓದಿಸಿಕೊಂಡು ಆಪ್ತವಾಗುವ ಅಂಕಣಮಾಲೆಯಿದು. ಜಗತ್ತಿನ ಹಲವು ವಿಚಾರಧಾರೆಗಳ ಹೊತ್ತ ನದಿ, ಮಾಹಿತಿಗಳ ಸರೋವರವೆಂದರೆ ತಪ್ಪಾಗಲಾರದು. ಇಂತಹ ‘ವಿಚಿತ್ರಾನ್ನ’ವನ್ನು ನೀವೂ ಸವಿದಿರುತ್ತೀರಿ. ಅಥವಾ ಸವಿಯಬೇಕೆನಿಸಿದ ಪಕ್ಷ ಹೆಚ್ಚಿನ ಮಾಹಿತಿಗಾಗಿ srivathsajoshi@yahoo.com ವಿಳಾಸಕ್ಕೆ ಪ್ರೀತಿಯಿಂದ ಒಂದು ಪತ್ರ ಬರೆಯಿರಿ. ಪ್ರೀತಿಯಿಂದ ಪ್ರತಿಕ್ರಿಯಿಸುತ್ತಾರೆ.
‘ವಿಚಿತ್ರಾನ್ನ’ ಓದುಗರ ಮಿದುಳನ್ನ ಸಾಣೆಹಿಡಿದು ಚುರುಕಾಗಿಸಬಲ್ಲುದು, ಹೊಳಪಾಗಿಸಬಲ್ಲುದು. ಓದುತ್ತ ಓದುತ್ತ ಮನವನ್ನು ಪ್ರಸನ್ನಗೊಳಿಸಬಲ್ಲ ಅಂಕಣಮಾಲೆಯಿದು ಎನ್ನಿಸದೇ ಇರಲಾರದು. ಓದುತ್ತ ಓದುತ್ತ ಹಲವಾರು ಕಂಡು ಕೇಳರಿಯದ ವಿಷಯಗಳನ್ನೆಲ್ಲ ಕಾಣುತ್ತ ಹೋಗುತ್ತೇವೆ ನಾವಿಲ್ಲಿ. ಜೊತೆ ಜೊತೆಗೆ ಈ ಎಲ್ಲ ವಿಚಾರಧಾರೆಗಳನ್ನ ಹೆಣೆದ ರಚನೆಕಾರರ ಬೌದ್ಧಿಕ ಕುಶಲತೆ ನಮ್ಮನ್ನು ಚಕಿತರನ್ನಾಗಿಸುತ್ತದೆ, ಯೋಚನೆಗೆ ತಳ್ಳುತ್ತದೆ. ಜೋಶಿಯವರ ಸೃಜನಶೀಲತೆ ಬೆರಗುಗೊಳಿಸುತ್ತದೆ. ಹುಟ್ಟುತ್ತಿರುವ ಸೂರ್ಯನ ಎಳೆಬೆಳಕನ್ನೂ, ಮುಳುಗುವ ಸೂರ್ಯನ ರಂಗನ್ನೂ, ಮುಸ್ಸಂಜೆಯ ತಂಗಾಳಿಯ ಬಾಹ್ಯಸೊಬಗನ್ನು ಸವಿಯುವವರಿಗೂ, ಅವುಗಳ ಆಂತರ್ಯ ಅರಸುವವರಿಗೂ, ಅವುಗಳಿಗೆಲ್ಲ ಮೂಲಹುಡುಕುವವರಿಗೆ, ಎಳೆಬೆಳಕಿನ ಎಳೆಯ ಜಾಡು ಅರಸುವವರಿಗೆ, ರಂಗಿನ ರಚನೆಗಳ ಅರಿಯಬೇಕೆನಿಸಿದವರಿಗೆ, ತಂಗಾಳಿಬೀಸುವ ದಿಕ್ಕಿಗೊಂದು ಕಾರಣ ಕೇಳುವವರನ್ನು, ಜಗತ್ತಿನ ಹೊಸ ಹೊಸ ವಿಚಾರಗಳನ್ನೂ ನಮ್ಮದೇ ಭಾಷೆಯೊಳಗೆ ಕಂಡುಕೊಳ್ಳಹೊರಟಿರುವವರಿಗೆಲ್ಲರಿಗೂ ದಾರಿಯಾಗುತ್ತದೆ ‘ವಿಚಿತ್ರಾನ್ನ’. ನಾವೆಲ್ಲ ಓದಿ ಅರ್ಥೈಸಿಕೊಳ್ಳಬೇಕಾದ್ದು, ಆಳವಡಿಸಿಕೊಳ್ಳಬೇಕಾದವುಗಳೆಲ್ಲವುಗಳ ಮಾಹಿತಿ ಮಾಲೆಯೇ ‘ವಿಚಿತ್ರಾನ್ನ’ವೆಂದರೆ ಖಂಡಿತವಾಗಿಯೂ ಉತ್ಪ್ರೇಕ್ಷೆಯೆನಿಸಲಾರದು. ‘ವಿಚಿತ್ರಾನ್ನ’ವನ್ನು ಓದಿ ನೋಡಿದಾಗಲೇ ಅರಿವಾಗುವುದು ಪ್ರಾಪಂಚಿಕ ಭಾವಗಳ ಹಾದಿಯಲ್ಲಿ ಮಾಹಿತಿಕೇಂದ್ರಕ್ಕೆ ತಲುಪಿದ್ದೇವೆ ಎಂಬುದು.
ಕಳೆದು ಹೋಗುತ್ತಿದ್ದೇನೆ
ಮಾತು ಮಾತಿಗೂ ಗದರಿಕಣ್ಣಲ್ಲಿ ಪ್ರೀತಿ ಹರಿಸಿ ನನ್ನ ತಬ್ಬಿದ್ದವಳ ಮಡಿಲಸೆರೆ ಬಿಡಿಸಿಪ್ರಪಂಚದೆಡೆ ದಾರಿ ತೋರಿದಅಪ್ಪನ ಅಕ್ಕರೆಯಡಿ ತೋಯ್ದುಕರಗಿ ಹೋಗುತ್ತಿರುವೆನೇನು ಕಳೆದು!
ಹಾಗಿತ್ತು ಹೀಗಿತ್ತು ಒಂದು ಮತ್ತೊಂದುಹೀಗೆ ಹಾಗೆಲ್ಲ ಇತ್ತೊಮ್ಮೆ ಹಿಂದೆಕಷ್ಟ-ಕಾರ್ಪಣ್ಯ ಮಡಿ-ಶಾಸ್ತ್ರಕೆಒಗ್ಗಿ ತಗ್ಗಿ ಬಗ್ಗಿದ್ದವರು ನಾವುಎನ್ನುತ್ತಲೇ ತನ್ನದೆಲ್ಲವ ಝಾಡಿಸಿವಿಮಾನದ ಈ ಯುಗಕೂ ತನ್ನೆಲ್ಲವ ರೂಢಿಸಿಕೊಂಡಅಪ್ಪಟ ಕಲಿಯುಗದ ಅಜ್ಜಿಯವಾತ್ಸಲ್ಯದ ಹಾಸಿಗೆಯಲಿ ನಿದ್ರಿಸಿನಿದ್ದೆಯಾಗಿ ಹೋಗುತ್ತಿದ್ದೇನೆಯೇ ಕಳೆದು!
ಗಡಿಬಿಡಿಯ ಅಡುಗೆಯಲೂನೆನಪಾದ ಅಂಗಳದ ಗಡಿಗೆಯ ಹೂಗಿಡಗುನುಗುನು ಹಾಡುತ್ತ ಹೆಣೆದ ಅರ್ಧಂಬರ್ಧ ಶಾಲುಒಲೆಯ ಮೇಲಿನ ಹಾಲುನೆಲವ ಕಂಡದ್ದನ್ನುಆಚೆಮನೆಯವಳಿಗೂ ಹೇಳಿ ನಕ್ಕುಈಚೆ ಸರಿದಾಗ ಕಂಡ ಮಗನ ಮುದ್ದಿಸಿಕೊಂಚ ತಡವಾದರೂ ಕಾಯುತ್ತ ನನ್ನಕಂಡಾಗ ಕಿರುನಕ್ಕು ನಿಡುಸುಯ್ವ ಅಮ್ಮನಮಮತೆಯಾಳದಿ ಇಳಿದುಹುಗಿದು ಹೋಗುತ್ತಿದ್ದೇನೆಯೇ ಕಳೆದು!
ಯಾವತ್ತೋ ಬರೆದದ್ದು, ಆವತ್ತು ಹೀಗೆಯೇ ಅವರೆಲ್ಲರ ನಡು ಕಳೆದುಹೋಗಿದ್ದೆ, ಇವತ್ತು ಈ ಸಾಲುಗಳೆಲ್ಲ ನನ್ನೊಳಗೆ ಕಳೆದುಹೋಗಿವೆ.
ಬಾಡಿಗೆಮನೆ ಬದಲಾವಣೆ
ಬೆಳದಿಂಗಳ ವಿಳಾಸ ಕೂಡ
ಬದಲಾಗದ ದೂರವಾಣಿ
ಸನಿಹವಿರದು
ಇಲ್ಲದ ಕೊಂಡಿನಂಟು
ದೂರವಾಣಿ ಅಂಕೆ ಸಂಖ್ಯೆ
ಹತ್ತು ಎಂದರೆ ಇಳಿಯುವುದಿಲ್ಲ
ಅಂತರ್ಜಾಲದ ಜಾಲ ಸಲೀಸಾಗಿ ಸಿಗದೆ
ಏಳು ಹನ್ನೊಂದು
ಹನ್ನೆರಡನೆಯ ದಿನ ಮನೆಮಂದಿಗೆಲ್ಲ ದುಃಖ
ಜಾಡ ಜಾಳಿಗೆಗಳು
ಮಾಯ ಮತ್ತು ಮಂತ್ರ
ಖಾಲಿ ಗೂಡಿನ ಮೂಲೆಯಲಿ
ವಿಳಾಸ ಬೇಕಿರದ
ಪರಿಮಳದ ಶುಚಿಪತ್ರ(ಪತ್ರೆ)
ಬಿಟ್ಟ ಸ್ಥಳ ತುಂಬಿದ್ದೇವೆ
ಎಲ್ಲ ತುಂಬಿದ್ದರೂ ಖಾಲಿ ಜಾಗ
ಬಿಟ್ಟ ಸ್ಥಳ ತುಂಬಿ ತುಂಬಿ
ಅಲ್ಲಿ ಬಿಟ್ಟುಹೋಗುತ್ತದೆ ಸ್ಥಳಇಲ್ಲಿ ತುಂಬಿದಷ್ಟೂ
ತರಕಾರಿ ಸಂತೆಯಲಿ ಸಿಕ್ಕ
ಅಪರಿಚಿತರು
ಪಕ್ಕದ ಕಿಟಕಿ-ಬಾಗಿಲುಗಳಲೇ
ಎದುರಾಗಿ ಮುಗುಳ್ನಗುತ್ತೇನೆ
ತುಟಿಬದಿಗಳು ಸುಸ್ತಾಗುವತನಕ
ಸಧ್ಯಕ್ಕೆ ಮನಸಿಲ್ಲ ಮಾತಾಡುವುದಕ್ಕೆ
ಅರ್ಥವಾಗುವತನಕ ಒಣಜಂಭ
ಅರಿತಾದ ಮೇಲೆ ಅಡಕೇಳಲು ಮೌನವ
ಬಂದೇ ಬರುತ್ತಾರೆ
ಎಷ್ಟೆಂದರೂ ಅಕ್ಕಪಕ್ಕ ನೆರೆಹೊರೆಯವರಲ್ಲವೆ!
ನಿದ್ರೆ ಹಾಡುತ್ತದೆ
‘ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ’
ಒಂದೇ ಸಮಹಠ ನಿದ್ರೆಯದು
ನಿದ್ರಿಸುತ್ತಿಲ್ಲ ನಿದ್ರೆ
ಅಳುತ್ತಲೆ ಇದೆ
‘ಮನೆಗೆ ಹೋಗೋಣ ಮನೆಗೆ ಹೋಗೋಣ’
ಬೆಚ್ಚಿಬಿದ್ದು ಎದ್ದುಕುಳಿತ ನಿದ್ರೆಗೆ
ಬುದ್ಧಿಹೇಳುತ್ತೇನೆ
ನಾವಿರುವುದೇ ನಮ್ಮನೆ, ಇಲ್ಲಿ ಎಲ್ಲವೂ ನಮ್ಮದೇ...
ಮತ್ತು ಯಾವುದೂ ನಮ್ಮದಲ್ಲ
ಇಲ್ಲಿ ಕಾವಲಿಗೆ ನಾವಿದ್ದೇವೆ
ಅಲ್ಲಿ ಬೀಗ ಎಲ್ಲವನೂ ಕಾಯುತ್ತದೆ
ನಮಗೆಷ್ಟೊಂದು ಮನೆಗಳು!
ಬಾಡಿಗೆಯದಾದರೂ
ಬದಲಾಯಿಸುವಷ್ಟು!
ಅವರಿಗೆ....
ಮನೆಯೇ ಇಲ್ಲ
ಅದಕಾಗಿ
ಬದಲಾಯಿಸುತಲಿದ್ದಾರೆ
ರಸ್ತೆಯಂಚುಗಳನೇ...
[ಕಳೆದ ಶುಕ್ರವಾರ ಮನೆ ಬದಲಾಯಿಸಿದೆವು, ಮನದ ಮಾತುಗಳೆಲ್ಲ ನಿಮ್ಮ ಮುಂದಿಲ್ಲಿ ಸಾಲುಗಳಾಗಿವೆ. ]
ಅರಿವಿಗೇನರಿವು...
ಹರಿವ ಜಲಕೇನರಿವು ತನ್ನಂಚೆ ವಿಳಾಸ
ಆಗಸವು ಅರಿತಿಹುದೆ ತನ್ನಾದಿ ಅಂತ್ಯವನು
ನಿನಗೆ ಅರಿವಿತ್ತೆ ಈ ಹೊಸಿಲು ನಿನದೆಂದು
ಮೊಗ್ಗರಿತು ಅರಳುವುದೆ ಹೂವಾಗಿ ತಾನು
ಮೊಳಕೆಗೇನರಿವು ತಾನೊಂದು ಎಲೆಯೆಂದು
ಸಸಿಗೆ ಅರಿವಿಹುದೇ ನಾಳೆ ತಾ ಮರವೆಂದು
ಹುಟ್ಟು ತಾ ಹುಟ್ಟುವುದೆ ಮರಣವನು ಅರಿತು
ಬತ್ತಿಗರಿವಿಹುದೆ ತಾ ಬೆಳಗುತಿಹೆನೆಂದು
ತೈಲಕೇನರಿವು ದೀಪವೇ ತಾನೆಂದು
ಮೌನ ಅರಿತಿಹುದೆ ತನ್ನರ್ಥವೇನೆಂದು
ಮಾತರಿತು ಮುಗಿವುದೇ ಮೌನ ತಾನೆಂದು
ಸತ್ಯಕ್ಕೆ ಅರಿವಿಹುದೆ ತಾನೊಂದು ಸುಳ್ಳೆಂದು
ಸುಳ್ಳಿಗೇನರಿವು ಶೂನ್ಯ ತಾನೆಂದು
ಆಳಕ್ಕೆ ಅರಿವಿಹುದೆ ತನ್ನೆತ್ತರದ ಮಿತಿ
ಎತ್ತರವು ಅಳೆಯುವುದೆ ತನ್ನಾಳವನ್ನು
ನಿನಗರಿವೆ ನಿನ್ನರ್ಥಕೆ ಅರ್ಥವೇನೆಂದು
ಇಂದುನಾಳೆಗಳಂಚಿಗೆ ಹೆಸರು ಏನೆಂದು
ಅನಂತಕೂ ಅಂತ್ಯವೊಂದಿರಲೇಬೇಕು
ಪ್ರತಿ ಅಂತ್ಯಕೂ ಆದಿಯೊಂದಿರಲೇಬೇಕು
ಕುಂಚಕೇನರಿವು ಹಿನ್ನೆಲೆಯ ರಂಗಿನದು...
‘ನಿನ್ನೊಳಗೇನೋ ನೋವಿದೆ, ಹೇಳುತ್ತಿಲ್ಲ ’ ಅಂದವನ ಮಾತಿಗೆ ನಿಧಾನಕ್ಕೆ ಉಸುರಿದೆ.
‘ಅವನ ಫೋಟೋ ಡೆಸ್ಕ್ ಟಾಪ್ ಅಲ್ಲಿಟ್ಟಿದ್ದೆ , ಈಗ ಕಾಣಿಸ್ತಿಲ್ಲ’ಅಂದೆ.
‘ಓ..ಅದಾ..ಸ್ಸಾ..ರೀ. ನಾನು ನಿನ್ನೆ ಅದನ್ನ ನೋಡಿದೆ, ನಿಂಗೆ ಬೇಡವೇನೋ ಅಂದ್ಕೊಂಡು ನಿನ್ನ ಕೇಳ್ದೇನೇ ರಿಸೈಕಲ್ ಬಿನ್ ಗೆ ಹಾಕ್ಬಿಟ್ಟೆ, ಅಲ್ಲೊಂದ್ಸಲ ಹುಡ್ಕು ಸಿಗ್ಬಹುದು’ ಅಂದ.
ಯಾಕೋ ಏನು ಮಾಡೋಕೆ ಹೋದ್ರೂ ಈಗೀಗ ಕೆಲಸಗಳ್ಯಾವುವೂ ಸುಸೂತ್ರವಾಗಿ ಸಾಗ್ತ ಇಲ್ಲ, ಬರೆಯೋಕೆ ಮನ್ಸಿಲ್ಲ, ಓದೋಕೆ ...ಓದೋಕೂ ಮನ್ಸಿಲ್ಲ.
‘ಸುಮ್ನೆ ಕೂತಿರ್ಬೇಕು ಅಂದ್ಕೊಂಡು ಕೂತ್ಕೊಳ್ಳೋಕೆ ಹದಿಮೂರುವರ್ಷದ ಹುಡುಗಿಗೆ ಸಿಗೋವಷ್ಟು ಟೈಮ್ ನಂಗೆ ಸಿಗತ್ತಾ? ಹದಿಮೂರನ್ನ ತಿರುಮುರುವಾಗಿಡೋಷ್ಟು ವಯಸ್ಸಾಗ್ತ ಬಂತು’ ಅಂತ ಯೋಚಿಸಿದವಳಿಗೆ ನಗು ಬಂತು ‘ವರ್ಷ ಎಷ್ಟೇ ಆದ್ರೂ ದಿನಕ್ಕಿರೋದು ಇಪ್ಪತ್ನಾಲ್ಕು ಗಂಟೆ ಮಾತ್ರ ಅಲ್ಲವಾ?’ ಅನ್ನಿಸಿ ತುಟಿಬದಿಗೆ ನಕ್ಕು ಸುಮ್ಮನಾದೆ.
ಯೋಚಿಸ್ತಿರೋವಾಗ್ಲೇ ಮತ್ತೆ ಕೇಳ್ದ ‘ಏನೇ.. ಯಾಕ್ ಹೀಗಿರ್ತೀಯಾ?’ ಅಂದ.
ಹೀಗೇ ಕೂತಿದ್ರೆ ಇವನಿನ್ನು ಸುಮ್ಮನಿರೋಲ್ಲ ಅಂತ ಗೊತ್ತಾಯ್ತು, ಆಗಿದ್ದಾಗ್ಲಿ, ಹೇಳಿಯೇಬಿಡೋಣ ಅಂದ್ಕೊಂಡು ಹೇಳ್ದೆ ‘ಅವನನ್ನ ಸೆಲೆಕ್ಟ್ ಮಾಡೋಕೆ ಟ್ರೈ ಮಾಡ್ತಿದ್ದೆ, ಆಗ್ಲಿಲ್ಲ ’ ಅಂದೆ ಸಣ್ಣ ಧ್ವನಿಯನ್ನ ಕಷ್ಟಪಟ್ಟು ಆಚೆತಂದ್ಕೊಂಡು. ಇವನೇನಂತಾನೋ ಅನ್ನೋ ಭಯ ಧ್ವನಿಯನ್ನ ಸುತ್ಕೊಂಡ ಹಾಗಿತ್ತು.
‘ಎಲ್ಲಿದಾನೆ ಅವನು?’ ಅಂತ ಕೆಳ್ದ.
‘ಇಲ್ಲೇ....ಸಿಕ್ದ, ನೋಡು’ ಅಂದೆ. ‘ಹಾಗಾದ್ರೆ...magic wand tool ತಗೊಂಡು ಅವನ ಸುತ್ತಲೂ ಒಂದು ಸುತ್ತು ಓಡಾಡ್ಸು, ಆಗ ನೋಡು, ಅವನನ್ನ ನೀನ್ ಸೆಲೆಕ್ಟ್ ಮಾಡ್ತೀಯೋ, ಅವನು ನಿನ್ನ ಸೆಲೆಕ್ಟ್ ಮಾಡ್ತಾನೋ ಗೊತಾಗತ್ತೆ..’ ಅಂತ ಹೇಳಿ ನಕ್ಕವನನ್ನೇ ನೋಡ್ತಾ ಇದ್ದೆ.
ನಂಗೂ ನಗು ಬಂತು ನಿಜವಾಗ್ಲೂ.... ಎಷ್ಟು ಒಳ್ಳೆಯವನು ಅಂತ ಮತ್ತೆ ಮತ್ತೆ ಅನ್ನಿಸಿಬಿಡೋದು ಇಂತ ಗಳಿಗೆಗಳಲ್ಲೇ.....
ಅವನ ಕೈ ಹಿಡ್ಕೊಂಡು ಮನೆಯಾಚೆ ಕರಕೊಂಡುಬಂದು ನಿಲ್ಲಿಸಿ ಆಗಸ ನೋಡ್ತಾ ಅಲ್ಲೇ ನಿಂತ್ಕೊಂಡೆ. ಮತ್ತೆ ಹೇಳ್ದೆ ಅವನ ಕಿವಿಯಲ್ಲಿ ‘ನಿನ್ನ ಸೆಲೆಕ್ಟ್ ಮಾಡಿದ್ದಾಯ್ತು, ನಿನ್ನಿಷ್ಟದ ನೀಲಿಯಲ್ಲಿ ಯಾವ ನೀಲಿಯನ್ನ background ಗೆ ಇಡಲಿ’ ಅಂತ ಕೇಳ್ದೆ. ಇಬ್ರೂ ಆಗಸ ನೋಡ್ತಾ ನಿಂತಿದ್ವಿ. ಆಗಸದಲ್ಲಿ ಆರು ಥರದ ನೀಲಿಗಳು ತೇಲಾಡ್ತಾ ಇದ್ರೆ... ಅವನಲ್ಲಿ ಮುಳುಗ್ತಾ ಇದ್ದ, ಇವನು ಮಸುಕಾಗಿ ನಿಂತಿದ್ದ. ದೂರದಲ್ಲಿ ಹಕ್ಕಿಗಳೆರಡು ಹಾರ್ತಾ ಇದ್ರೆ ರೆಕ್ಕೆಯಿಲ್ಲದೇ ನಾ ಇವನ ಜೊತೆ ಹಾರಡ್ತಾ ಇದ್ದೆ.
ಕುಂಚಕ್ಕೆ ಗೊತ್ತಿರುವುದಿಲ್ಲ ಹಿನ್ನೆಲೆಗೆ ಯಾವ ಬಣ್ಣ ಹೊಂದುತ್ತದೆಯಂತ, ಹಿನ್ನೆಲೆಯ ಬಣ್ಣವನ್ನೂ ನಾವೇ ಆರಿಸಿಕೊಂಡಿರಬೇಕು.
