ಚಂಪಕಾವತಿ
ಎದೆ ಗುಂಡಿಗೆ ಕೊಟ್ಟು ಕೇಳಿಸಿಕೊಳ್ಳುವಿರಾ ಬಡಿತ....
ಪದಗಳು ಮುಗಿದಿವೆ. ಗಂಟಲಲ್ಲಿ ಬೆಂಕಿಯಿದೆ. ತುಟಿಯಲ್ಲಿ ನೆತ್ತರಿದೆ. ರಾಕ್ ಸಾಂಗ್ ಹೊಮ್ಮುತ್ತಿರುವಂತೆ, ವಾಲ್ಯೂಮ್ ಏರಿಸಿದ ಕೂಡಲೇ ಟಿವಿ ಹೊಡೆದುಕೊಂಡಿದೆ. ತಾಜ್ ಹೋಟೆಲ್‌ನ ಆರನೇ ಮಹಡಿಯಲ್ಲಿದ್ದವರಿಗೆ ಆಗಲೂ ಗೊತ್ತಿಲ್ಲ, ಅದು ಮೆಷಿನ್‌ಗನ್‌ನ ಎದೆಬಡಿತವೆಂದು. ಅವರೂ ಗುಂಡಿನ ಸದ್ದನ್ನು ಕೇಳಿದ್ದು ಟಿವಿ, ಥಿಯೇಟರ್‌ಗಳಲ್ಲಿ ಮಾತ್ರ. ಇಂಗ್ಲೆಂಡ್‌ನ ವಿರುದ್ಧ ಐದನೇ ಪಂದ್ಯವನ್ನು ಗೆದ್ದು ಕೊಟ್ಟ ವೀರೂನ ವೀರಾವೇಶದ ಸಂಭ್ರಮದಲ್ಲಿ ನಾವೆಲ್ಲ ಸುಖ ನಿದ್ದೆಗೆ ಜಾರುವಷ್ಟರಲ್ಲಿ ಸುದ್ದಿ ವಾಹಿನಿಗಳು ಬಾಯಿಬಾಯಿ ಹೊಡೆದುಕೊಳ್ಳಲಾರಂಭಿಸಿದವು. ಬೆಂಗಳೂರಿನ ತುಂತುರು ಮಳೆಯಲ್ಲಿ ಕುಟುಕುಟು ಚಳಿಯಲ್ಲಿ ಮುದ್ದೆಯಾಗಿರುವ ನಮಗೆ, ಮುಂಬಯಿಯಲ್ಲಿ ಹೊತ್ತಿರುವ ಬೆಂಕಿ ಚುರುಕು ಮುಟ್ಟಿಸಿದೆಯೆ? ಅಥವಾ ಐದನೇ ಪಂದ್ಯವನ್ನೂ ಇಂಗ್ಲೆಂಡ್ ಸೋತಾಗ ‘ಮತ್ತದೇ ಹಳೇ ಕತೆ -ಇಂಗ್ಲೆಂಡ್‌ಗೆ ಸೋಲು !’ ಎನ್ನುವಂತೆ ಇದು ಮಾಮೂಲು ಅನ್ನುತ್ತೇವೆಯೆ?!
ಬ್ರಿಟನ್‌ನ ಮಿಲಿಯಾಧೀಶ, ೭೩ರ ಪ್ರಾಯದ ಆಂಡ್ರಿಯಾಸ್ ಲಿವ್ರಾಸ್ ನಾನಾ ತರಹದ ವಾಹನಗಳನ್ನು ಬಾಡಿಗೆ ಕೊಡುವ ದೊಡ್ಡ ಕಂಪನಿಯ ದೊರೆ. ಮುಂಬಯಿಯಲ್ಲಿ ಅತ್ಯುತ್ತಮ ಊಟ-ತಿಂಡಿ ತಾಜ್‌ನಲ್ಲಿ ಸಿಗುತ್ತದೆ ಅಂತ ಬುಧವಾರ ಸಂಜೆ ಹೋಗಿದ್ದರು. ‘ಟೇಬಲ್ ಎದುರು ಕುಳಿತಿದ್ದೆನಷ್ಟೆ. ಕಾರಿಡಾರ್‌ನಿಂದ ಮೆಷಿನ್‌ಗನ್ ಸದ್ದು. ತಕ್ಷಣ ಟೇಬಲ್ ಕೆಳಗೆ ತೂರಿಕೊಂಡೆವು. ಬಂದವರು ಲೈಟ್ ಆರಿಸಿದರೂ, ಮೆಷಿನ್‌ಗನ್‌ಗಳು ಮೊಳಗುತ್ತಲೇ ಇದ್ದವು. ಅಲ್ಲಿಂದ ನಮ್ಮನ್ನು ಅಡುಗೆಕೋಣೆಗೆ, ನೆಲಮಹಡಿಗೆ, ಅಲ್ಲಿಂದ ಅತಿಥಿಗಳನ್ನು ಸ್ವಾಗತಿಸುವ ಈ ಕೋಣೆಗೆ. ಸುಮಾರು ೧೦೦೦ ಜನ ಇಲ್ಲಿರಬಹುದು. ಯಾರೂ ಏನನ್ನೂ ಹೇಳುವುದಿಲ್ಲ, ಬಾಗಿಲುಗಳಿಗೆ ಹೊರಗಿನಿಂದ ಬೀಗ ಜಡಿಯಲಾಗಿದೆ. ಹೋಟೆಲ್ ಉದ್ಯೋಗಿಗಳು ನೀರು-ಸ್ಯಾಂಡ್‌ವಿಚ್‌ಗಳನ್ನು ಕೊಡುತ್ತಾ ಸಹಾಯ ಮಾಡುತ್ತಿದ್ದಾರೆ. ಆದರೆ ನಿಜವಾಗಿ ಯಾರೂ ಏನನ್ನೂ ತಿನ್ನುತ್ತಿಲ್ಲ. ಈಗ ಎಲ್ಲ ತಣ್ಣಗಿದೆ, ೪೫ ನಿಮಿಷಗಳ ಹಿಂದೆ ಬಾಂಬ್ ಸ್ಫೋಟಿಸಿತ್ತು’ ಹೀಗೆಂದು ಬುಧವಾರ ರಾತ್ರಿ, ಗುರುವಾರ ಬೆಳಗ್ಗೆ ಬಿಬಿಸಿಗೆ ಫೋನ್ ಮಾಡಿದ್ದ ; ಸುರಕ್ಷಿತವಾಗಿದ್ದೇನೆಂದು ಮಗನಿಗೆ ಫೋನ್ ಮೂಲಕ ತಿಳಿಸಿದ್ದ ಆಂಡ್ರಿಯಾಸ್. ಶುಕ್ರವಾರ ಬೆಳಗ್ಗೆ ಆತ ಸತ್ತ ಸುದ್ದಿ ಖಾತ್ರಿಯಾಗಿತ್ತು.
ಮಾಧ್ಯಮ ಪ್ರತಿನಿಧಿ ಬ್ರಿಟಿಷ್ ಪ್ರಜೆ ಅಲಾನ್ ಜೋನ್ಸ್ ಟ್ರೈಡೆಂಟ್ ಒಬೆರಾಯ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ. ಸಹೋದ್ಯೋಗಿಯೊಂದಿಗೆ ಲಿಫ್ಟ್‌ನಲ್ಲಿ ಸ್ವಾಗತ ಕೋಣೆಗೆ ಇಳಿದು, ಬಾಗಿಲು ತೆರೆದುಕೊಳ್ಳುತ್ತಿದ್ದಂತೆ ಭಾರೀ ಶಬ್ದ. ಲಿಫ್ಟ್‌ನಲ್ಲಿದ್ದ ನಾಲ್ವರಲ್ಲಿ ಜಪಾನೀಯನೊಬ್ಬನಿಗೆ ಗುಂಡು ಬಿದ್ದಿತ್ತು. ‘ನಾನು ತಕ್ಷಣ ಲಿಫ್ಟ್‌ನ ಬಾಗಿಲು ಮುಚ್ಚಿಕೊಳ್ಳುವ ಗುಂಡಿ ಅದುಮಿದೆ. ಗುಂಡು ತಿಂದವನ ಕಾಲು ಬಾಗಿಲಿಗೆ ಅಡ್ಡವಾಗಿತ್ತು. ಅಯ್ಯೋ ಏನು ಮಾಡಲಿ? ತಳ್ಳಿದೆ. ಮೇಲಿನ ಮಹಡಿಯಲ್ಲಿರುವ ರೂಮಿಗೆ ನಾವು ಹಿಂದಿರುಗಿದಾಗ, ನೆಲ ಮಹಡಿಯಲ್ಲಿರುವ ಸುರಕ್ಷಿತ ಜಾಗಕ್ಕೆ ಹೋಗುವ ಸೂಚನೆ ನಮಗೆ ಬಂತು. ಅಲ್ಲಿ ನಾವು ತುಂಬ ಜನ ಸೇರಿದ್ದೆವು. ಸುಮಾರು ಒಂದು ಗಂಟೆಯ ಬಳಿಕ ಪೊಲೀಸರು ಹೊರಗೆ ಕರೆದೊಯ್ದರು’ ಎಂದು ವಿವರಿಸುತ್ತಾನೆ ಆತ.
ಆಸ್ಟ್ರೇಲಿಯಾದ ‘ಮೊಬಿ ಎಕ್ಸ್‌ಪ್ರೆಸ್ ’ಕಂಪನಿಯ ಮಾಲೀಕನ ೨೨ ವರ್ಷದ ಮಗ ಯುನ್ ಚೈನ್ ಲಾಯ್‌ಗೆ ಎಚ್ಚರಾದದ್ದು ಗುಂಡಿನ ಮಳೆಯ ಸದ್ದು ಕೇಳತೊಡಗಿದಾಗ. ಸಿಡ್ನಿಯಲ್ಲಿರುವ ಅಮ್ಮನ ಜತೆ ಮಾತಾಡಿ ತಾನು ಒಬೆರಾಯ್ ಹೋಟೆಲ್‌ನಿಂದ ಹೊರಗೆ ಬಂದಿರುವುದಾಗಿ ಹೇಳಿದ್ದಾನೆ. ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ. ‘ಅಯ್ಯೊ ಅವನದ್ದು ಮೊದಲ ವಿದೇಶ ಪ್ರಯಾಣ. ಭಾವೋದ್ವೇಗಕ್ಕೆ ಒಳಗಾಗಬೇಡ ಅಂದಿದ್ದೀವಿ. ಅವನು ಬಹಳ ಸೆನ್ಸಿಬಲ್. ಸಂದರ್ಭಗಳನ್ನು ನಿಭಾಯಿಸುತ್ತಾನೆ ’ಅಂತ ಹೇಳುತ್ತಲೇ ಉಮ್ಮಳಿಸುತ್ತಿದ್ದಾಳೆ ಅಮ್ಮ.
ಸ್ವಾಗತ ಕೋಣೆಯಲ್ಲಿ ಬುಲೆಟ್‌ಗಳು ಹಾರಾಡುತ್ತಿದ್ದರೆ, ಆಸ್ಟ್ರೇಲಿಯಾದ ನಟಿ ಬ್ರೂಕ್ ಸ್ಯಾಚೆಲ್ ಬಾತ್‌ರೂಂನಲ್ಲಿ ಸಿಲುಕಿಕೊಂಡಿದ್ದಳು. ಸಿಗರೇಟ್‌ಗೆಂದು ಹೋಟೆಲ್‌ನ ಮುಖ್ಯ ದ್ವಾರದ ಬಳಿ ಹೋದ ಆಕೆ, ಹಿಂತಿರುಗುವಾಗ ಸ್ವಾಗತ ಕೋಣೆ ಬಿಟ್ಟು, ನೆಲ ಮಹಡಿಯಲ್ಲಿರುವ ಬಾತ್‌ರೂಂ ಬಳಿಯಾಗಿ ಬರುತ್ತಿದ್ದಳು. ಆಗಲೇ ಶುರುವಾಯಿತು ಸ್ವಾಗತ ಕೋಣೆಯಲ್ಲಿ ದಾಳಿ. ಆಕೆ ಇತರ ಆರು ಜನರೊಂದಿಗೆ ಬಾತ್‌ರೂಂನಲ್ಲಿ ೪೫ ನಿಮಿಷಗಳ ಕಾಲ ಬಚ್ಚಿಟ್ಟುಕೊಂಡಳು. ಆ ಮಧ್ಯೆಯೂ ಹೊರಹೋಗಲು ಯತ್ನಿಸಿದ ಕೆಲವರು, ಕಾರಿಡಾರ್‌ಗಳಲ್ಲಿ ಹೆಣಗಳು ಬೀಳುತ್ತಿವೆ ಅಂದರಂತೆ. ಬಳಿಕ ಹೋಟೆಲ್ ಉದ್ಯೋಗಿಗಳು ಬಂದು ಅವರನ್ನು ರಕ್ಷಿಸಿದರು. ಬಚಾವಾಗುವಾಗ ಕಾರಿಡಾರ್‌ಗಳಲ್ಲಿ , ಮೆಟ್ಟಿಲುಗಳಲ್ಲಿ ಶವಗಳು ಬಿದ್ದಿದ್ದವು ಅಂದಿದ್ದಾಳೆ ಆಕೆ. ತಾಜ್ ಹೋಟೇಲಿನಲ್ಲಿ ರೂಮ್ ಕಾದಿರಿಸಿಕೊಂಡು ಮುಂಬಯಿ ವಿಮಾನ ಏರಬೇಕಾಗಿದ್ದ್ ಕ್ರಿಕೆಟಿಗ ಶೇನ್ ವಾರ್ನ್ ಸಿಂಗಾಪುರದಲ್ಲೇ ತತ್ತರಿಸಿದರು. ಐನೂರು ರೂಪಾಯಿಗಳಿದ್ದ್ದ ಪರ್ಸ್‌ನ್ನೋ ಮೊಬೈಲ್‌ನ್ನೋ ಕಳೆದುಕೊಂಡರೆ ಚಡಪಡಿಸುವ ನಮಗೆ, ಪರದೇಶದಲ್ಲಿ ಸಾವಿನ ಬಾಯಿಯೊಳಗೆ ತಲೆಯಿಟ್ಟು ಬರುವ ಅನುಭವ ಎಂಥದ್ದೆಂದು ಚೆನ್ನಾಗಿ ಅರ್ಥವಾಗಬೇಕೇ? ಆಸ್ಟ್ರೇಲಿಯಾದಲ್ಲಿ ಭಯೋತ್ಪಾದಕರಿಗೆ ನೆರವಾದ ಆರೋಪದಲ್ಲಿ ಬಂಧಿನಾಗಿದ್ದ ಹನೀಫ್ ಬಳಿಕ ಬಚಾವಾಗಿ ಬೆಂಗಳೂರಿಗೆ ಬಂದ ದಿನದ ಸಂಭ್ರಮ ನೆನಪಿಸಿಕೊಳ್ಳಿ. ಆಗ, ಇಲ್ಲಿನ ಅನಾಹುತಕಾರಿ ದೃಶ್ಯಗಳನ್ನು ನೋಡಿ,ಯಾವುದೋ ದೇಶದಲ್ಲಿ ಚಡಪಡಿಸುತ್ತಿರುವ ಒಡನಾಡಿ ಜೀವಗಳ ಚಹರೆ ನಮ್ಮ ಕಣ್ಣೆದುರು ಬಂದೀತು.
‘ಮಾಧ್ಯಮಗಳಿಂದ ಉಗ್ರವಾದಕ್ಕೆ ವಿಶೇಷ ಪ್ರಚಾರ ಸಿಗುತ್ತಿದೆ ’ ಎಂಬ ಮಾತಿಗೆ ಪ್ರತಿಯಾಗಿ ‘ಉಗ್ರರ ಫೋಟೊಗಳನ್ನು ತೆಗೆದದ್ದು ಮಾಧ್ಯಮಗಳೇ’ ಎಂಬ ಹೆಗ್ಗಳಿಕೆಯೊಂದಿಗೆ ಚರ್ಚೆ ನಡೆದಿದೆ. ಆದರೆ ಎರಡು ದಿನಗಳು ಕಳೆಯುವಷ್ಟರಲ್ಲಿ, ಎಲ್ಲಿ ಚುನಾವಣೆಗಳಿವೆಯೋ ಅಲ್ಲಿ ಭಯೋತ್ಪಾದನೆಯ ಲಾಭ ಪಡೆಯುವ ಕಾರ್‍ಯಾಚರಣೆ ಆರಂಭವಾಗುತ್ತದೆ . ನೆತ್ತರಲ್ಲಿ ಅದ್ದಿರುವ ಸ್ಥಳಗಳಿಗೆ ಚೆಂದ ಇಸ್ತ್ರಿ ಮಾಡಿದ ಅಚ್ಚ ಬಿಳಿ ಅಂಗಿಯಲ್ಲಿ ನಿಧಾನವಾಗಿ ನಡೆದು ಬರುವ ರಾಜಕಾರಣಿಗಳನ್ನು ನೋಡಿದರೆ, ಎಂಥವನಿಗಾದರೂ ವಾಕರಿಕೆ ಬರಬೇಕು. ಆದರೆ ಮಹಾನ್ ಮುಂಬಯಿ ಪ್ರೇಮಿ, ಅನ್ಯ ರಾಜ್ಯದವರ ವಿರುದ್ಧವೇ ಕತ್ತಿ ಮಸೆಯುತ್ತಿದ್ದ ರಾಜ್ ಠಾಕ್ರೆ ಯಾವ ಟಿವಿಯಲ್ಲೂ ಕಣ್ಣಿಗೆ ಬೀಳಲಿಲ್ಲ !
ಮೊನ್ನೆಮೊನ್ನೆ ಬಿಡುಗಡೆಯಾದ ‘ಮುಂಬೈ ಮೇರಿ ಜಾನ್’-‘ವೆಡ್‌ನೆಸ್‌ಡೇ’ ಸಿನಿಮಾಗಳು ನೆನಪಿನಿಂದ ಮಾಸುವ ಮೊದಲೇ ಉಗ್ರರ ಸಿನಿಮಾ ಬಿಡುಗಡೆಯಾಗಿದೆ. ಆದರೆ ನಮ್ಮ ದುರದೃಷ್ಟ, ಅದರ ನಕಲಿ ಸಿಡಿಗಳು ಎಲ್ಲೂ ಸಿಗುವುದಿಲ್ಲ! ಹಾಗಂತ ಅವರ ಸಿನಿಮಾ ಯಾವುದರ ನಕಲಿಯೂ ಆಲ್ಲ. ಅದು ಒರಿಜಿನಲ್, ಅವರಷ್ಟೇ ಮಾಡಬಹುದಾದ್ದು ಅನ್ನುವಂಥದ್ದು. ‘ವೆಡ್‌ನೆಸ್‌ಡೇ’ ಚಿತ್ರದಲ್ಲಿ ಆಮ್ ಆದ್ಮೀ ನಾಸಿರುದ್ದೀನ್‌ಶಾ, ಸೆರೆಯಲ್ಲಿದ್ದ ನಾಲ್ವರು ಉಗ್ರರನ್ನು ಶಿಕ್ಷಿಸಲು ಎಷ್ಟು ಕಷ್ಟ ಪಟ್ಟ?! ತಾನು ಉಗ್ರಗಾಮಿಯೆಂದು ಬಿಂಬಿಸಿಕೊಂಡು, ಸೆರೆಯಲ್ಲಿದ್ದವರನ್ನು ಪೊಲೀಸರ ಮೂಲಕವೇ ಕರೆಸಿಕೊಂಡು ಬಾಂಬ್ ಸ್ಫೋಟಿಸಿ ಉಗ್ರರನ್ನು ಮುಗಿಸಲು ಯತ್ನಿಸುತ್ತಾನೆ. ಕಣ್ಣೆದುರೇ ಮನೆ ಹೊಕ್ಕ ಉಗ್ರರನ್ನು ಸದೆಬಡಿಯಲು ನಾವು ಪಡುತ್ತಿರುವ ಪರದಾಟ ನೋಡಿದರೆ, ಸಾಮಾನ್ಯ ಪ್ರಜೆಯೊಬ್ಬ ಹೀಗೂ ಮಾಡಬಹುದು ಅಂತ ತೋರಿಸಿದ ವೆಡ್‌ನೆಸ್‌ಡೇ ಸಿನಿಮಾ ಬಾಲಿಶವಾಗಿ ಕಾಣುತ್ತಿದೆ. ನಾವು ಹಿಂದಿದ್ದೇವೆ. ಎಷ್ಟೆಂದರೆ ನಮ್ಮ ಹಿಂದಿನಿಂದ ಯಾವ ಉಗ್ರರು ಬರಲಾರರು ! ತೆರೆದ ಎದೆಯಲ್ಲಿ ಹೋಗಿ ಪ್ರಾಣ ಕಳೆದುಕೊಂಡ ಭಯೋತ್ಪಾದನಾ ನಿಗ್ರಹ ದಳದ ಹಿರಿಯ ಅಧಿಕಾರಿಗಳ ಹೆಂಡತಿಮಕ್ಕಳು ಎದೆಎದೆ ಬಡಿದುಕೊಂಡು ಕಣ್ಣೀರುಗರೆಯುತ್ತಿದ್ದಾರೆ. ನಮ್ಮ ನೇತಾರರು ನಿಜಕ್ಕೂ ಮುಖ ಮುಚ್ಚಿಕೊಂಡು ಓಡಾಡಬೇಕು.
ದಾವೂದ್ ಇಬ್ರಾಹಿಂ ಕೈವಾಡದಲ್ಲಿ ೧೯೯೭ರಲ್ಲಿ ೨೫೦ಕ್ಕೂ ಹೆಚ್ಚು ಜನರ ಜೀವ ಹಿಸುಕುವಲ್ಲಿಂದ ಶುರು; ಮುಂಬಯಿಯಲ್ಲಿ ಸರಾಸರಿ ವರ್ಷಕ್ಕೊಂದು ಸಾವಿನ ಹಬ್ಬ. ಯಾವ ಸರಕಾರಗಳೂ ತಡೆಯಲಾರದ್ದನ್ನು ಉಗ್ರರು ಮಾಡುತ್ತಿದ್ದಾರೆ. ಅವರಿಗೆ ತಡೆಯೂ ಇಲ್ಲ, ಯಾವ ಭಿಡೆಯೂ ಇಲ್ಲ. ರಾತ್ರಿ ಒಂದು ಗಂಟೆ ಕರೆಂಟು ಕೈಕೊಟ್ಟರೆ ನಡೆಯುವ ಸರಗಳ್ಳತನಗಳನ್ನು, ಮನೆಯಲ್ಲಿದ್ದ ಒಂಟಿ ಮಹಿಳೆ ಮಟಮಟ ಮಧ್ಯಾಹ್ನವೇ ಕೊಲೆಗೀಡಾಗುವುದನ್ನು ತಡೆಯಲಾಗದ ನಮ್ಮ ಸರಕಾರಗಳು, ರಕ್ಕಸ ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದರೆ ನೀವು ನಂಬುತ್ತೀರಾ?
ಬೊಂಬೆ ಹುಡುಗಿ

ಇದು ಡಿಂಕು ಪ್ರಪಂಚ. ಬಂದವರನ್ನು ಹೋದವರನ್ನು ಅದು ಕಣ್ಣು ಕೆಕ್ಕರಿಸಿ ನೋಡುತ್ತಿದೆ. ಸರಕ್ಕನೆ ಕುತ್ತಿಗೆ ಹೊರಳಿಸುತ್ತದೆ. ಅದೊಂಥರಾ ಛದ್ಮವೇಷಧಾರಿಯೂ. ಡಾಕ್ಟರು, ಕುಡುಕ, ರೌಡಿ, ಸ್ವಾಮೀಜಿ ಹೀಗೆ ನಾನಾ ವೇಷಗಳಲ್ಲಿ ಕಂಗೊಳಿಸಿ, ನಾನಾ ಸ್ವರ ಹೊರಡಿಸಿದರೂ ಡಿಂಕು ಡಿಂಕೂನೇ. ಡಿಂಕು ಹುಡುಗಿಯೋ, ಹುಡುಗನೋ? ನೆನೆದವರ ಮನದಲ್ಲಿ ಡಿಂಕು ಎಲ್ಲವೂ. ಯಾರೇ ಆಗಲಿ, ಮಾತಾಡಿಸಿದಾಗಲೇ ಅದಕ್ಕೆ ತೃಪ್ತಿ. ಅಂತಹ ಡಿಂಕು ಎಂದರೆ ಒಂದು ಮರದ ಗೊಂಬೆ. ಅದು ಮಾತಾಡುವಂತೆ ಮಾಡಿದವರು ಇಂದುಶ್ರೀ. ಇವರ ಕೈಗೆ ಸಿಕ್ಕರೆ - 'ಮೂಕಂ ಕರೋತಿ ವಾಚಾಲಂ' !
ಇಂಗ್ಲಿಷ್‌ನಲ್ಲಿ ಇಂಥವರಿಗೆ ventriloquist ಅನ್ನುತ್ತಾರೆ. ಅಂದರೆ ಮರದ ವಸ್ತುವಿನಿಂದ ಸ್ವರ ಬರುವಂತೆ ಪ್ರದರ್ಶನ ನೀಡುವವರು ಎಂದರ್ಥ. ಜಾದೂಗಾರರೇ ಹೆಚ್ಚಾಗಿ ಮಾಡುವ, `ಮಾತನಾಡುವ ಗೊಂಬೆ' ಅಂತ ಕರೆಸಿಕೊಳ್ಳುವ ಈ ಪ್ರದರ್ಶನ ನೀಡುವವರು ಬಹಳ ಕಡಿಮೆ ಜನ. ಕರ್ನಾಟಕದಲ್ಲಿ ಉದಯ್ ಜಾದೂಗಾರ್, ಪ್ರಹ್ಲಾದ್ ಆಚಾರ್ಯ (ಕೋತಿ)ರಮೇಶ್, ರಂಗಶಾಹಿ ಹೀಗೆ ಕೆಲವರಷ್ಟೇ ನಡೆಸಿಕೊಡುತ್ತಾರೆ. ಮಾತು-ಕೃತಿ ಎರಡರಲ್ಲೂ ಇದಕ್ಕೆ ವಿಶೇಷ ಅಭ್ಯಾಸ ಬೇಕು. ಆದರೆ ಹೆಣ್ಣೊಬ್ಬಳು ಈ ಪ್ರದರ್ಶನವನ್ನು ಆರಿಸಿಕೊಂಡದ್ದು, ಅದರಲ್ಲಿ ಪಳಗಿದ್ದು , ಲಿಮ್ಕಾ ದಾಖಲೆ ಮಾಡಿದ್ದು ಒಂದು ವಿಶೇಷ ಕತೆ .ತನ್ನ ಗೊಂಬೆ ಡಿಂಕುವನ್ನು ಮಾತಾಡಿಸುತ್ತಾ ಟಿವಿ ವಾಹಿನಿಗಳ ಮೂಲಕ ರಾಜ್ಯಾದ್ಯಂತ ಈಗ ಕಾಣಿಸಿಕೊಳ್ಳುತ್ತಿರುವವರು ಇಂದುಶ್ರೀ.
ಎಸ್‌ಎಸ್‌ಎಲ್‌ಸಿ ಮುಗಿಸಿ, ಪಿಯುಸಿ ಸೈನ್ಸ್ ಬೇಜಾರಾಗಿ, ಚಿತ್ರಕಲಾ ಪರಿಷತ್‌ನಲ್ಲಿ ಐದು ವರ್ಷಗಳ `ಬ್ಯಾಚುಲರ್ ಆಫ್ ಫೈನ್ ಆರ್ಟ್ಸ್' ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಈಕೆಯ, ಬೆಂಗಳೂರಿನ ಪುಟ್ಟ ಮನೆ ಹೊಕ್ಕರೆ ಗೋಡೆ ತುಂಬೆಲ್ಲ ಪ್ರಶಸ್ತಿ ಫಲಕಗಳು. ಆಕೆ ರಚಿಸಿದ ಪೇಂಟಿಂಗ್ಸ್‌ಗಳು, ದೊಡ್ಡ ದೊಡ್ಡ ಆಲ್ಬಮ್‌ಗಳಲ್ಲಿ ಪ್ರಶಸ್ತಿ ಪತ್ರಗಳು, ಪತ್ರಿಕಾ ವರದಿಗಳ ಕಟ್ಟಿಂಗ್ಸ್‌ಗಳು. ಹಾಸಿಗೆ ಮೇಲೆ ಡಿಂಕು, ಅದರ ತಮ್ಮ , ಮತ್ತೊಂದು ಕೋತಿ ! `ಫೆಬ್ರವರಿನಲ್ಲಿ `ಜೀ ಕನ್ನಡ' ಚಾನೆಲ್‌ನಲ್ಲಿ `ನೆನೆದವರ ಮನದಲ್ಲಿ ಡಿಂಕು ದುನಿಯಾ' ಅಂತ ಆರಂಭವಾದಾಗ ಒಂದೂವರೆ ಗಂಟೆ ಶೋ ಕೊಡ್ತಿದ್ದೆ. ಅಷ್ಟು ದೀರ್ಘ ಅವಧಿಯ ಕಾರ್ಯಕ್ರಮ, ಟೆಲಿವಿಷನ್ ಹಿಸ್ಟರೀನಲ್ಲೇ ಫಸ್ಟ್ ಟೈಮ್ ಆಗಿತ್ತು. ಈಗ ಪ್ರತಿ ಶನಿವಾರ ೯ರಿಂದ ೧೦ ರವರೆಗೆ ಬರತ್ತೆ. ಇದಕ್ಕಿಂತ ಮೊದಲು ಸಿಟಿ ಕೇಬಲ್‌ನಲ್ಲಿ ಎರಡೂವರೆ ವರ್ಷ ಪ್ರತಿ ಶುಕ್ರವಾರ ಒಂದು ಗಂಟೆ ಕಾರ್ಯಕ್ರಮ ಕೊಡ್ತಾ ಇದ್ದೆ. ಅದು ಸುಮಾರು ೧೬೦ ಶೋಗಳಾಗಿತ್ತು. ಹಾಗೇ ಹೆಚ್ಚಿನ ಎಲ್ಲ ಸಿಟಿ ಚಾನಲ್‌ಗಳಲ್ಲಿ ಮತ್ತು ಉದಯ, ಯು-೨, ಈ-ಟಿವಿ, ಟಿವಿ ೯ಗಳಲ್ಲಿ ಕಾರ್ಯಕ್ರಮ ಕೊಟ್ಟಿದೀನಿ' ಅಂತ ವಿವರ ಕೊಟ್ಟರು ಇಂದುಶ್ರೀ. ತನ್ನ ಪ್ರತಿಭೆಯನ್ನು ಆಕೆ ಮೊದಲು ತೋರಿದ್ದು ಮೆಜಿಷಿಯನ್ ಆಗಿಯಂತೆ. ಆಕೆಯ ತಂದೆ ಆರ್.ಎಂ.ರವೀಂದ್ರ ನಾಟಕ ಕಲಾವಿದರು, ತಾಯಿ ಮಂಜುಳಾ ರವೀಂದ್ರ ಹಾಡುಗಾರ್ತಿ. ಹೀಗಾಗಿ ಸಣ್ಣವಳಾಗಿದ್ದಾಗಲೇ ಎಲ್ಲದರಲ್ಲೂ ಆಸಕ್ತಿ ಇತ್ತು. ಆದರೆ ಮ್ಯಾಜಿಕ್ ಬಗ್ಗೆ ಏನೂ ಗೊತ್ತಿರಲಿಲ್ಲ. ಯಾರಪ್ಪಾ ಓದೋದು, ಮ್ಯಾಜಿಕ್ ಕಲಿತ್ರೆ ಏನಾದ್ರೂ ಆಗಬಹುದು ಅನ್ನೋ ಮೆಂಟಾಲಿಟಿನಲ್ಲಿ ಎಲ್ಲ ಶುರು ಆಗಿದ್ದು. ಹೀಗೆ ಎರಡನೇ ಕ್ಲಾಸ್‌ನಲ್ಲಿದ್ದಾಗಲೇ ಮ್ಯಾಜಿಕ್ ಅಭ್ಯಾಸ ಶುರು. ಬಳಿಕ ಕೆ.ಎಸ್.ರಮೇಶ್ ಬೆಂಗಳೂರಲ್ಲಿ `ಇಂಟರ್‌ನ್ಯಾಷನಲ್ ಮ್ಯಾಜಿಕ್ ಫೆಸ್ಟಿವಲ್ ಮಾಡಿದ್ದಾಗ ಅಲ್ಲದೆ, ಹೈದರಾಬಾದ್, ದಿಲ್ಲಿ, ಗೋವಾ, ಕೇರಳ ಮೊದಲಾದೆಡೆ ಕಾರ್ಯಕ್ರಮ ನೀಡಿದೆ ಅನ್ನುತ್ತಾರೆ.ಇಂದುಶ್ರೀ ಮ್ಯಾಜಿಕ್‌ನ್ನು ಗುರು-ಶಿಷ್ಯ ಪರಂಪರೆಯಲ್ಲಿ ಯಾರಿಂದಲೂ ಕಲಿತವರಲ್ಲ. ಅವರ ಫ್ಯಾಮಿಲಿ ಫ್ರೆಂಡ್ ಕೇಶವ್ ಜಾದೂಗಾರ್ ಮೊದಲು ಸಣ್ಣ ಸಣ್ಣ ಟ್ರಿಕ್ಸ್ ಕಲಿಸಿದರಂತೆ. ಅದರಿಂದ ಆಸಕ್ತಿ ಹೆಚ್ಚಾಗಿ ಸಿ.ಡಿ, ಪುಸ್ತಕಗಳನ್ನು ನೋಡಿ ಅಭ್ಯಾಸ ಮಾಡಿದರು. ಜಾದೂಗಾರರಾದ ಎ.ಕೆ.ದತ್, ಉದಯ್ ಜಾದೂಗಾರ್, ಕುದ್ರೋಳಿ ಗಣೇಶ್‌ರೆಲ್ಲಾ ಪ್ರೋ ನೀಡಿದರು. ಈ ವೆಂಟಿಲಾಟಿಸ್‌ಮ್ ಕೂಡಾ ಹಾಗೆಯೇ. ಯಾರೋ ಮಾಡಿದ್ದನ್ನು ನೋಡಿ ಆಸಕ್ತಿ ಬಂದು ತನ್ನ ಪಾಡಿಗೆ ತಾನು ಕಲಿತದ್ದು. ಗಂಟೆಗಟ್ಟಲೆ ಅಭ್ಯಾಸ ಮಾಡಿದ್ದು. ಪಾಲ್‌ವಿಂಚಿನ್ ಅಂಥವರ ಸಿ.ಡಿ ನೋಡಿ ಕರಗತ ಮಾಡಿಕೊಂಡದ್ದು. ಹಾಗೆ ಒಮ್ಮೆ ಮ್ಯಾಜಿಕ್ ಷೋನಲ್ಲಿ ಕೋತಿ ತಗೊಂಡು ಹೋಗಿ ಮಾತಾಡಿಸಿದ್ದು. ಬಳಿಕ ದತ್ತಾ ಅಂಕಲ್ ಅವರು, ರಾಮಸ್ವಾಮಿ ಅವರಿಂದ ಈ ಡಿಂಕು ಗೊಂಬೆ ಕೊಡಿಸಿದರಂತೆ.
'ಈ ಮಾತಾಡೋ ಗೊಂಬೆ ಡಿಂಕು ಜನಪ್ರಿಯನಾದ ನಂತ್ರ, ಮ್ಯಾಜಿಕ್ ಷೋ ಹೊರಗಡೆ ಮಾಡ್ತಾ, ಟಿವಿನಲ್ಲಿ ಡಿಂಕು ಮಾತ್ರ ಬರ್‍ತಾನೆ. ಅದನ್ನೊಂದು ಗೊಂಬೆ ಅನ್ನೋದಕ್ಕಿಂತ ಕ್ಯಾರೆಕ್ಟರ್ ಆಗಿ ಜನ ಸ್ವೀಕರಿಸಿದ್ದಾರೆ. ಅವನು ಹಿಂದು-ಮುಸ್ಲಿಂ-ಕ್ರಿಶ್ಚನ್ ಆಗಿದ್ದಾನೆ. ಸಮಾಜಕ್ಕೆ ಒಳ್ಳೇ ಸಂದೇಶ ಕೊಡೋ ಕೆಲಸ ಮಾಡ್ತಿದ್ದಾನೆ. ಬಾಂಬ್ ಬ್ಲಾಸ್ಟ್ ಬಗ್ಗೆ , ಚಿಕುನ್‌ಗುನ್ಯಾ ಬಗ್ಗೆ ಹೀಗೆ ಸಮಕಾಲೀನ ವಿಷಯಗಳನ್ನೇ ನಾವು ಚರ್ಚಿಸ್ತೀವಿ. ಈ ಕಾನ್ಸೆಪ್ಟ್‌ಗಳಿಗೆ ರಾಮನಾಥ್ ಅಂತ ಒಬ್ಬರು ನನಗೆ ಹೆಲ್ಪ್ ಮಾಡ್ತಾರೆ. ತತ್‌ಕ್ಷಣದ ಪ್ರತಿಕ್ರಿಯೆ-ಸ್ಪಂದನೆ ಇದಕ್ಕೆ ಮುಖ್ಯ. ಲೈವ್ ಶೋನಲ್ಲಿ ಅಂತೂ ಯಾರ್‍ಯಾರೋ ಏನೇನೋ ಪ್ರಶ್ನೆ ಕೇಳ್ತಾರೆ. ಅವುಗಳನ್ನು ನಿಭಾಯಿಸುವ ಸ್ಕಿಲ್ ಬೇಕು' ಅಂತಾಳೆ ಈಕೆ. ಮೂರು ಗೊಂಬೆಗಳ ಜತೆ ಏಕಕಾಲದಲ್ಲಿ ನೀಡಿದ ಪ್ರದರ್ಶನದಿಂದ ಲಿಮ್ಕಾ ರೆಕಾರ್ಡ್ ದಾಖಲಿಸಿದ್ದು ಇಂದುಶ್ರೀ ಹೆಗ್ಗಳಿಕೆ. ಪ್ರತಿ ಶನಿವಾರ `ಸ್ಟಾರ್ ನ್ಯೂಸ್' ಚಾನೆಲ್‌ನಲ್ಲಿ ಲಿಮ್ಕಾ ರೆಕಾರ್ಡ್‌ಗಳ ಬಗ್ಗೆಯೇ `ವಾಹ್ ಇಂಡಿಯಾ' ಎಂಬ ಕಾರ್ಯಕ್ರಮ ಪ್ರಸಾರವಾಗುತ್ತದೆ. ಅದರಲ್ಲಿ ಕಳೆದ ಆಗಸ್ಟ್‌ನಲ್ಲಿ ಇವರ ಕಾರ್ಯಕ್ರಮ ಪ್ರಸಾರವಾಯಿತು. ಅದರಲ್ಲಿ ಎರಡು ಗೊಂಬೆಗಳನ್ನು ಎರಡು ಕೈಗಳಲ್ಲಿ, ಇನ್ನೊಂದನ್ನು ಕಾಲಲ್ಲಿ ಕುಣಿಸಿದರು, ಮಾತಾಡಿಸಿದರು. ಪ್ರತಿಯೊಂದು ಗೊಂಬೆಗೂ ತನ್ನದೇ ದನಿ, ಹಾವಭಾವಗಳು ! ಹೀಗೆ ಮೂರು ಗೊಂಬೆಗಳೂ ಏಕಕಾಲದಲ್ಲಿ ಅಭಿನಯಿಸುತ್ತಾ, ಇಂದುಶ್ರೀಯೂ ಅವುಗಳೊಂದಿಗೆ ಬೆರೆತು ಮಾತಾಡುವುದಕ್ಕೆ ಅಸಾಧಾರಣ ಅಭ್ಯಾಸವೇ ಬೇಕಲ್ಲ. `ಕೆಲವರು ಗೊಂಬೆಗಳನ್ನ ತುಂಬಾ ವಲ್ಗರ್ ಆಗಿ ಯೂಸ್ ಮಾಡ್ತಾರೆ. ನಾನು ಯಾವತ್ತೂ ಹಾಗೆ ಮಾಡಿಲ್ಲ, ಮಾಡೋಲ್ಲ. ಆದರೆ ಎಲ್ಲ ವರ್ಗದ ಜನರಿಗೂ ಇಷ್ಟ ಆಗಬೇಕು ಅನೋದು ನನ್ನಾಸೆ. ಕಾಮಿಡಿ ಇದ್ದಾಗ ಚಿಕ್ಕವರಿಂದ ದೊಡ್ಡವರವರೆಗೆ ಅಟ್ರ್ಯಾಕ್ಟ್ ಆಗ್ತಾರೆ. ಒಮ್ಮೆ ಲೈವ್ ಪ್ರೊಗ್ರಾಮ್‌ನಲ್ಲಿ ಕಾಲ್ ಮಾಡಿದೋರು- ಡಿಂಕು ರಾಜ್‌ಕುಮಾರ್ ಥರಾ. ಯಾವ ಪಾತ್ರ ಹಾಕಿದ್ರೂ ಸೂಟ್ ಆಗತ್ತೆ ಅಂದಿದ್ರು' ಅಂತಾರೆ ಇಂದುಶ್ರೀ. ಕೆಂಪೇಗೌಡ ಪ್ರಶಸ್ತಿ, ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ, ಕರ್ನಾಟಕ ಮಹಿಳಾ ರತ್ನ ಪ್ರಶಸ್ತಿ, ಸೌಂದರ್ಯ ಪ್ರಶಸ್ತಿ ಹೀಗೆ ಹತ್ತಾರು ಸನ್ಮಾನಗಳು ಇವರಿಗೆ ಸಂದಿವೆ. ಕಳೆದ ವರ್ಷ ಮೈಸೂರು ದಸರಾದ ಹಾಸ್ಯೋತ್ಸವದಲ್ಲಿ `ಮಾತಾಡುವ ಗೊಂಬೆ' ಕಾರ್ಯಕ್ರಮಕ್ಕೆ ದೊರೆತ ಅಮೋಘ ಪ್ರತಿಕ್ರಿಯೆ ಇವರಿಗೆ ಸದಾ ನೆನಪು.
ಶಾಲೆಗೆ ಹೋಗ್ತಿದ್ದಾಗ ಸೈಂಟಿಸ್ಟ್ ಆಗಬೇಕು ಅಂತ ಕನಸು ಕಾಣುತ್ತಿದ್ದ ಇಂದುಶ್ರೀ, ಈಗ ಅಪ್ಪ ,ಅಮ್ಮ ಹಾಗೂ ತಮ್ಮನೊಡಗೂಡಿ ಮೂರ್‍ನಾಲ್ಕು ಗಂಟೆಗಳ ಮ್ಯಾಜಿಕ್ ಕಾರ್ಯಕ್ರಮ ಕೊಡುತ್ತಾರೆ. ಹೀಗೆ ಕಳೆದ ಹದಿನಾಲ್ಕು ವರ್ಷಗಳಲ್ಲಿ ಸುಮಾರು ೨,೮೦೦ ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ. ಕಮಲಹಾಸನ್ ಸ್ಫೂರ್ತಿಯಿಂದ `ಡಿಂಕೂಸ್ ದಶಾವತಾರಂ' ನಡೆಸಿರುವ ಈಕೆ, ಸ್ವಲ್ಪ ಮಟ್ಟಿಗೆ ಹಾಡುತ್ತಾ, ಸಂಗೀತ ಸಾಧನಗಳನ್ನು ನುಡಿಸುತ್ತಾ, ಪೇಂಟಿಂಗ್ ಚೆನ್ನಾಗಿ ಮಾಡುವ ದಶಾವತಾರಿಯೇ. ಡಿಂಕು ಗೊಂಬೆಯು ಕೃಷ್ಣನಾಗಿ, ಡಿಂಕಾನಂದ ತೀರ್ಥಾನಂದ ಸ್ವಾಮೀಜಿಯಾಗಿ ಬಂದಾಗಲೆಲ್ಲ ಬಹಳ ಜಾಗ್ರತೆ ಬೇಕು. ತಮಾಷೆ ನೆಪದಲ್ಲಿ ಸ್ವಲ್ಪ ತುಟಿ ಮೀರಿದರೂ ಅದು ಸಮಸ್ಯೆ ಸೃಷ್ಟಿಸಬಹುದೆಂಬ ಎಚ್ಚರ ಇವರಿಗಿದೆ. ಇವರ ಪ್ರದರ್ಶನದ ಯಶಸ್ಸಿರುವುದು ಧ್ವನಿಯ ಮಾಂತ್ರಿಕತೆಯಲ್ಲಿ ಮತ್ತು ಸಂದರ್ಭಗಳನ್ನು ನಿರೂಪಿಸುವ ಜಾಣ್ಮೆಯಲ್ಲಿ. ಯಾವುದೋ ಸಿನಿಮಾ, ನಾಟಕದ ದೃಶ್ಯಗಳನ್ನು ಅನುಕರಿಸದೆ, ಹೊಸ ಹೊಸ ಹಾಸ್ಯ ದೃಶ್ಯಗಳನ್ನು ಹೆಣೆಯುವುದು ಇವರ ವೈಶಿಷ್ಟ್ಯ. ಅವುಗಳನ್ನು ಧ್ವನಿ ಚಮತ್ಕಾರದೊಂದಿಗೆ ಬೆಳೆಸುತ್ತಾ ಹಾಸ್ಯದ ಪಂಚಿಂಗ್ ಮತ್ತು ತೀವ್ರ ಪ್ರತ್ಯುತ್ಪನ್ನ ಮತಿತ್ವ ಕಾರ್‍ಯಕ್ರಮದ ಯಶಸ್ಸಿಗೆ ಮುಖ್ಯ ಕಾರಣ. ಯಾವುದೇ ಕಾರ್ಯಕ್ರಮವಾಗಿರಲಿ, ಯಾವುದೇ ವಿಷಯವಾಗಿರಲಿ, ಡಿಂಕು ಜತೆ ಇಂದುಶ್ರೀ ಬಂದರೆಂದರೆ ನಗೆ ಹೊನಲು ಗ್ಯಾರಂಟಿ. ಐದು ಗೊಂಬೆಗಳನ್ನು ಏಕಕಾಲದಲ್ಲಿ ಮಾತನಾಡಿಸಿ ಗಿನ್ನಿಸ್ ದಾಖಲೆ ಮಾಡಬೇಕೆಂಬ ಆಸೆ ಇಂದುಶ್ರೀಗೆ, ಗುಡ್‌ಲಕ್ ಅನ್ನಿ.
ಮಹಾಬಲ ಹೆಗಡೆ ಮಹೋತ್ಸವ
ಆಗಲೇ ಅವರಿಗೆ ಅಂದಿನ ಹಿರಿಯ-ಶ್ರೇಷ್ಠ ಕಲಾವಿದ ಮೂಡ್ಕಣಿ ನಾರಾಯಣ ಹೆಗಡೆಯವರ ಪರಿಚಯವಾಗಿತ್ತು. ಯಕ್ಷಗಾನ ಕುಟುಂಬದವನೇ ಆದ ಮಹಾಬಲರನ್ನು ಅವರೂ ಬಲ್ಲರು. ಅವರ ಬಗ್ಗೆ ಪ್ರೀತಿಯೂ ಇತ್ತು. ಯಾವಾಗಾದರೊಮ್ಮೆ ಮೂಡ್ಕಣಿ ಹೆಗಡೆಯವರ ಮನೆಗೆ ಹೋಗುತ್ತಿದ್ದ ಮಹಾಬಲರು ಒಮ್ಮೆ ಮೂಡ್ಕಣಿಗೆ ಹೋದಾಗ ಅವರಿಂದ ಮೂರು ಪ್ರಸಂಗ ಪಟ್ಟಿಗಳನ್ನು ತಂದುಕೊಂಡಿದ್ದರು. ಅವುಗಳನ್ನು ಓದಿದ್ದೂ ಆಯಿತು. ತಿರುಗಿ ಕೊಡುವಾಗ ಈ ಕಿಡಿಗೇಡಿ ಹುಡುಗ ಆ ಪ್ರಸಂಗಗಳಲ್ಲಿ ತಾನು ಮಾಡಬಹುದಾದ (ಮಾಡಬೇಕೆನಿಸಿದ) ಮೂರು ಪಾತ್ರಗಳಿಗೆ ಸಂಬಂಧಿಸಿದ ಪುಟಗಳನ್ನಷ್ಟೇ ಹರಿದು ವಾಪಸ್ಸು ತೆಗೆದುಕೊಂಡು ಹೋಗಿ ಕೊಟ್ಟ. (ಎಲ್.ಎಸ್.ಶಾಸ್ತ್ರಿ ಅವರು ಬರೆದಿರುವ ಕೆರೆಮನೆ ಮಹಾಬಲ ಹೆಗಡೆಯವರ ಜೀವನ ಚರಿತ್ರೆಯಿಂದ ಆಯ್ದ ಭಾಗಗಳು)***ನವಂಬರ್ ೧೬ರ ಭಾನುವಾರದ ಬೆಳಗ್ಗೆ ೧೦ ಕ್ಕೆ ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಮಹಾಬಲ ಹೆಗಡೆ ಮಹೋತ್ಸವ. ಅವರ ಜೀವನಕಥನದ ಪುಸ್ತಕ-ವೆಬ್‌ಸೈಟ್ ಬಿಡುಗಡೆ, ಸಾಕ್ಷ್ಯಚಿತ್ರ-ಛಾಯಾಚಿತ್ರ ಪ್ರದರ್ಶನ. ಮಾಯಾರಾವ್, ಶಂಭು ಹೆಗಡೆ, ಪ್ರಭಾಕರ ಜೋಶಿ ಮೊದಲಾದವರು ಭಾಗವಹಿಸುತ್ತಾರೆ.
ಅಶ್ವತ್ಥಾಮನ ಅಪ್ಪ ದ್ರೋಣ ಭಟ್ರು ಹೇಗಿದ್ದಾರೆ?
೨೧-೪-೧೯೮೩ಪ್ರೀತಿಯ ಪ್ರೇಮ,ಮೇಜಿನ ಮೇಲೆ ೪-೫ ಕಾಗದಗಳು. ಎಲ್ಲವೂ ನನಗೇ! ಬಾಚಿ ಬಾಚಿ ತಕೊಂಡೆ. ಖುಶಿ ಆಯ್ತು. ಉಮಾ, ಸಾವಿತ್ರಿ, ಸತ್ಯ, ಕುಮಾರ-ಅರೇ ಪುಟ್ಟಕ್ಕಯ್ಯ, ಆಕೆಯೂ ಉತ್ತರ ಕೊಟ್ಟುಬಿಟ್ಟಳು ! ವರ್ಷಗಳ ನಂತರ ಬಂದ ಅವಳ ಕಾಗದ. ಹನುಮಂತ, ರಾಮ, ಶಬರಿ ಅಬ್ಬಬ್ಬಾ ಒಳ್ಳೊಳ್ಳೆಯ ಹೆಸರೇ ಸಿಕ್ಕಿದೆ ನಿಮಗೆ. ನಮ್ಮಮ್ಮ ಬಂದ ಕಾಗದ ಎಲ್ಲ ಓದಿಕೊಂಡು, ರಾಮ, ಕೃಷ್ಣ ಅಂತ ಇಡ್ಳಿ ತಿಂತಿತ್ತು. ಅಂತೂ ಅವನ ಅಮ್ಮನ ಹೊಟ್ಟೆಯಲ್ಲಿ ಆರಾಮವಾಗಿ ಬೆಚ್ಚಗೆ ಕೂತು, ಎಲ್ಲರನ್ನೂ ಬಹಳ ಕಾಯುವಂತೆ ಮಾಡಿದ. ಮಹಾತುಂಟನಾಗ್ತಾನೋ ಏನೋ ಪೋರ. ಎಲ್ಲ ಕಾಗದಗಳೂ ಇವತ್ತು ಬೆಳಗ್ಗೆ ತಲುಪಿದ್ದು ಇಲ್ಲಿಗೆ. ರಾಧೆ-ಉಮಾ ಶುಕ್ರವಾರ ಬಂದ ಮೇಲೆ ಮುಂದಿನ-ಹಿಂದಿನ ಸುದ್ದಿಗಳು ನನಗೆ ಸಿಕ್ಕಬೇಕು.
ರಾತ್ರಿ ಹತ್ತು ಗಂಟೆ ಕಳೆದಿರಬೇಕೀಗ. ನಿನ್ನೆ ನಾಲ್ಕು ಹನಿ ಮಳೆ (೮ ಸೆಂಟ್ಸ್ ನಮ್ಮ ಭಾಷೆಯಲ್ಲಿ ಹೇಳುವುದಾದರೆ) ಬಿತ್ತು. ನಾಳೆ ಹಲಸಿನ ಹಣ್ಣು ಪಾಯಸ ಮಾಡ್ತೇವೆ, ಬರ್‍ತೀರಾ? ನಮ್ಮಲ್ಲಿ ಮಳೆ ಬೀಳದೆ ತೋಟದಲ್ಲಿ ಕೆಲಸವಿಲ್ಲ. sprinkler ಹಾಕಿಸ್ತಾ ಇದ್ದಾರೆ. ನನಗೆ ಮನೆಯಲ್ಲೀಗ ನಿಮಿಷ ಪುರುಸೊತ್ತು ಇಲ್ಲ. ಉಮ ಇಲ್ಲದೇ ದಿನ ಆ ಗದ್ದೆ ಹತ್ತಿರ ಹೋಗಬೇಕಾಗುತ್ತದೆ. ನಿತ್ಯ ಬೆಳಗ್ಗೆ ಕಾಫಿ-ತಿಂಡಿ ಕಾರ್ಯಕ್ರಮ ಮುಗಿಸಿ, ಒಲೆಯಲ್ಲಿ ಏನಾದರೂ ಬೇಯುವುದಕ್ಕಿಟ್ಟು ಸರೀ ೮ ಗಂಟೆಗೆ ಹೊರಟೆನಾದರೆ, ಮನೆಗೆ ಬರುವಾಗ ೯ ಗಂಟೆ. ಬಟ್ಟೆ ಹೊಲಿಯುವುದೂ ತುಂಬ ಉಂಟು, ಮದುವೆ ಸೀಸನ್ ನೋಡು.
ನಿನಗೇನು, ದೊಡ್ಡ ಕುಂಬಳಕಾಯಿ ಸೋದರತ್ತೇಂತ ಬಡಾಯಿ ಕೊಚ್ಚು . ನಾನೂ ಸಾ ಅತ್ತೆ ಆಗ್ತೇನೆ ಒಂದಲ್ಲ ಒಂದು ದಿನ ನೋಡ್ತಾ ಇರು !ನೀನಲ್ಲೇ ಬಿದ್ದಿರು. ಇಲ್ಲಿಗೆ ಬರ್‍ಬೇಡ. ಇಲ್ಲಿ ರಾಶಿ ರಾಶಿ ಮಲ್ಲಿಗೆ ರಾಶಿ. ಅದರ ಜತೆಗೆ ರಂಜದ ಹೂವಿನ ಮಾಲೆಯೂ ಮುಡಿಪ್ಪೆತ್ತುವುದೀಗ. ಕೆಲಸದವರ ಮಕ್ಕಳು ನನ್ನ ಜತೆಗೆ ಗದ್ದೆಗೆ ಬರ್‍ತಾರೆ. ತೋಟದಲ್ಲಿ ಮರದ ಹತ್ತಿರ ಹೂವು ಹೆರ್‍ಕಲು ಅವರನ್ನು ಬಿಟ್ಟು ನಾನು ಓಟ. ಮನೆಗೆ ಹೂವು ತಂದರೆ ಅಮ್ಮ ಸುರಿದು ಕೊಡ್ತಾಳೆ. ನಿನ್ನ ಅತ್ತಿಗಮ್ಮ ನಿನಗೆ ಕೈಕೊಟ್ಟದ್ದಕ್ಕೆ-ನೀನೇ ಅವಳ ಅತ್ತಿಗಮ್ಮ ಆದರೆ ಆದೀತಂತೆ. ಟಾರ್ಚ್ ಇಲ್ಲದೇ ಹುಡುಕಿ ಹುಡುಕಿ ಅವಳಣ್ಣನಿಗೀಗ- ಈ ವರ್ಷ ಜೀವನ್ ಸಾಥೀ ಸಿಕ್ಕಲೇ ಇಲ್ಲ.
೧.೫.೮೩. ಪ್ರೇಮ, ತಿಂಗಳು ನಾಲ್ಕು ಕಳೆದು ಐದೂ ಆಯ್ತು, ನನಗಲ್ಲಿ ೮೩ನೇ ಇಸವಿಗೆ. ನಿನ್ನ ಅಕ್ಕ, ಭಾವ ನಿನ್ನೆ ಬಂದು ವಕ್ಕರಿಸಿದ್ದಾವೆ. ನಾನು ಮನೆ ಎಲ್ಲ ಚಂದ ಮಾಡಿ ನೀಟ್ ಆಗಿ ಇಟ್ಟುಕೊಂಡಿದ್ದೆ. ಈ ದಿನಗಳಲ್ಲಿ ಇವು ಬಂದು, ಆಟದವರ ಡೇರೆ ಮಾಡಿ ಹಾಕಿದ್ದಾವೆ. ಇಡೀ ಮನೆ ತಂತಿ-ಹಗ್ಗ. ಅಲ್ಲಿಇಲ್ಲಿ ಬಟ್ಟೆ ರಾಶಿ-ನೇತ್ಹಾಕಿದ್ದಾವೆ. ನೀನ್ಯಾಕೆ ಕತ್ತೆ ನನಿಗೆ ಬಯ್ತಾ ಕೂತದ್ದು? ಇಕೊ ಇನ್ನೂ ಇನ್ನೂ ಬಯ್ದರೆ, ನಿನಗೆ ಡಾರ್ಜಿಲಿಂಗ್ ಇರಲಿ, ಡೆಹ್ರಾಡೂನ್‌ಗೂ ಕೈಕೊಡ್ತೇನೆ. ನನ್ನ influence ನಿಂದ ಆಗುವಂತದ್ದು-ಬೇಕಿದ್ದರೆ ನನಗೆ ಸಲಾಂ ಹಾಕ್ತಾ ಇರು ! (ನಿನ್ನ ಪುಟ್ಟಕ್ಕನನ್ನು ವಿಚಾರಿಸಿಕೋ ಡೆಹ್ರಾಡಬ್ ಸೆಟ್ಟು ಯಾವುದೂಂತ. ಅದು ನೋಡಿ ಮಾತಾಡಿ ಬಂದದೆ.) ನಾನು ಅಲ್ಲಿಂದ ಬಂದ್ಮೇಲೆ ಬರ್‍ದ ಕಾಗದಕ್ಕೆ ನೀನೇ ಉತ್ತರ ಕೊಡ್ಲಿಲ್ವಾಂತ? ಅತ್ತೆಮ್ಮನಿಗೆ ೮೦ ಪೈಸೆ ಚಿಲ್ರೆ ಲೆಖ್ಖ ಕೊನೆಗೂ ಸಿಕ್ಕಿತಾ?
ನಮ್ಮ ಪೂ...ಪೂರ್ಣಿಮಾ ಎಂತ ಮಾಡ್ತೆ? ಅದರ ಅಮ್ಮನಿಗೆ ರವಿಕೆಗಳನ್ನು ಹೊಲಿದ ಬಗ್ಗೆ ಕೊಚ್ತಾ ಇತ್ತು ರಾಧೆ ಇಲ್ಲಿ. ನಿನ್ನಕ್ಕನೀಗೀಗ ಭಾರೀ ಬಡಾಯಿ. ಯಾಕೆಂದರೆ...ತಾನೊಂದು ದೊಡ್ಡ ಜನ...ಎಲ್ಲವೂ ತನ್ನತ್ರವೇ ವಿಷಯ ಕೇಳ್ತಾವೇಂತ. ಸರಸ್ವತಿ ಮನೆ ಬಿಸಿನೀರು ಕಡುಬು, ದೂರ್ ಸೆಂಟರ್ ಪಾಯಸ ಎಲ್ಲಾ ಸಿಕ್ಕೀತಾ ನನಗೆ ಮತ್ತೆ ಬಂದರೆ? ಏ ಪ್ರೇಮ, ನೀನು ಆವತ್ತು ಕಳಿಸಿದ್ದ ನೆಕ್ಕರೆ ಮಾವಿನಕಾಯಿ ನಿನ್ನ ಅತ್ತಿಗಮ್ಮನಿಗೂ ತಿನ್ನಲು ಕೊಟ್ಟಿದ್ದೇನೆ. ರಾಧೆ ಕಂತ್ರಿ ತರ್‍ಲೇ ಇಲ್ಲ. ಬಂದದ್ದು ನೋಡಿದ್ರೆ ಬೆಂಗ್ಳೂರಿಂದ. ತಂದದ್ದು ಬದ್ನೆಕಾಯಿ ಎಂತದ್ದೂ ಇಲ್ಲ. ಉಮ ೩ ಬುಕ್ಸ್ ತಂದಿದ್ದಾನೆ. ತಾಯಿ, ಮೃತ್ಯುಂಜಯ, ಇನ್ನೊಂದು. ಹೆಸ್ರೂ ಮರ್‍ತೋಯ್ತ.
ದೇರಜ್ಜಮ್ಮ ಹೇಗುಂಟು? ಮರಿ ಮಗನನ್ನೂ ನೋಡಿ ಆಯ್ತಾ? ನನಗೀಗ ತುಂಬ ಹೊಟ್ಟೆಕಿಚ್ಚು ನಿಮ್ಮ ಮೂವರಲ್ಲಿ. ನೀವೆಲ್ಲ ಸೋದರತ್ತೆ ಆಗಿಬಿಟ್ಟಿರಿ. ನಾನು ಇನ್ನೂ ಆಗಲಿಲ್ಲ ಅಂತ. ಗಾಯತ್ರಿ ಅಕ್ಕನ ಮದುವೆಲಿ ಉಷಾ ಹೇಳಿದಳು, ಹೋದ ವರ್ಷ ಈ ತಿಂಗ್ಳಲ್ಲಿ ಗೌರಿಪೂಜೆ ಮಾಡ್ದವ್ರೆಲ್ಲ ಈ ವರ್ಷ ಗಣಪತಿ ಕೂರ್‍ಸಿದ್ದೇವೆ. ರಾಧ ಒಬ್ರೆ ಬಾಕಿ. ಗಾಣದಹಳ್ಳಿ ಪಟಾಲಾಂ ಬಂದಿತ್ತು ಮದುವೆಗೆ. ನಮ್ಮದೇ ಗಲಾಟೆ. ಇನ್ನೀಗ ೬ಕ್ಕೆ ಸುನಂದನ ಮದುವೆಯಲ್ಲಿ ಒಂದು ಸಂಭ್ರಮ. ಬರ್‍ತೀಯಾ ಅಕ್ಕನ ಜೊತೆ? ಪ್ರೇಮ, ನಾಳೆ ವಾಟೆಗಂಡಿಗೆ ( ಮಧ್ಯಾಹ್ನದ ಮನರಂಜನೆ ಮನೆ ಅಲ್ಲ) ಪೂಜೆಗೆ ಹೋಗ್ತಾರೆ ಉಮ, ರಾಧೆ. (ನಾನು ಚಕ್ಕರ್). ಗಂಟೆ ೧೦ ಕಳೆದಿದೆ. ಈ ರಾಧೆ ಇದ್ರೆ ನಮ್ಮ ಮನೆಗೆಲಸ ಮುಗಿಯುವುದೆಂದಿಲ್ಲ. ಅಶ್ವತ್ಥಾಮನ ಅಪ್ಪ ದ್ರೋಣ ಭಟ್ರು ಹೇಗಿದ್ದಾರೆ? ಹುಡುಗಿಯರನ್ನು ಕಂಡರೆ ಕರುಬುವವ? (ಅಲ್ಲ ಕರಗುವವ).ಇಂತು ನಿನ್ನಪ್ರಮೋದತ್ತಿಗೆ.(ಜಯನಿಗೆ ತಿಳಿಸು. ಮೊನ್ನೆ ಅದರ ಹಾರ್ಲೆ ಗಣೇಶನಿಗೆ ಕಾರಾಟ ತೂರಾಟ ಸಖತ್!)
***ನಮ್ಮೆಲ್ಲರ ಎದೆಯ ತಂಬೂರಿ ಶೃತಿಗೊಳಿಸುವ ಸಾಮರ್ಥ್ಯ ಈ ಪತ್ರಗಳಿಗಿದೆ. ಮದುವೆಯಾಗದ, ವಯಸ್ಸಿಗೆ ಬಂದ ಹೆಣ್ಣೊಬ್ಬಳು ತನ್ನ ಬಂಧು-ಸಮಾನಮನಸ್ಕೆಗೆ ಬರೆದ ಈ ಕಲರ್‌ಫುಲ್ ಪತ್ರ ನನಗಂತೂ ತುಂಬಾ ತುಂಬಾ ಖುಶಿ ಕೊಟ್ಟಿತು. ನಿಮಗೇನನಿಸಿತು? ಕಾಗ್ದ ಬರೀತೀರಾ?! (ಫೋಟೊ : ವಿನ್ಯಾಸ ಉಬರಡ್ಕ)
ಬೆಳ್ಳೇಕೆರೆಯ ಹಳ್ಳಿ ಥೇಟರ್ - ಅಂಕ ೭
ದೇವರನ್ನು ನಂಬದವರು
ನಮ್ಮಲ್ಲೇ ಇದ್ದ ಬಾಬು ಎಂಬ ತೋಟದ ಕೆಲಸಗಾರನಿಗೆ ನಾವು ಕಿತ್ತಲೆ ಫಸಲಿನಲ್ಲಿ ಬಂದ ಹಣದಲ್ಲಿ ಚೌಡಿಪೂಜೆಯನ್ನು 'ಜೋರಾಗಿ' ಮಾಡದೆ ನಾಟಕದ ಸಾಮಾನು ತಂದದ್ದು ಹಿಡಿಸಿರಲಿಲ್ಲ. ಒಂದು ಸಾರಿ ರಿಹರ್ಸಲ್ ನಡೆಯುತ್ತಿದ್ದಾಗ ನನಗೆ ಕೇಳುವಂತೆ ದೊಡ್ಡ ದನಿಯಲ್ಲಿ-
'ಇವರು ನಾಟಕ ಕುಣಿದರೆ ಯಾವ ದೇವರು ಮೆಚ್ಚುತ್ತಾನೆ?' ಎಂದ.'ದೇವರು ಮೆಚ್ಚುವುದು ಬೇಡ, ನೋಡಿದವರು ಮೆಚ್ಚಿದರೆ ಸಾಕು' ಎಂದೆ. ಸ್ವಲ್ಪ ಹೊತ್ತು ಸುಮ್ಮನಿದ್ದ. ಆ ವರ್ಷ ಸ್ವಲ್ಪ ಮಳೆ ಕಡಿಮೆಯಾಗಿತ್ತು. ಯಾರೋ ಮಳೆಯ ಸುದ್ದಿ ತೆಗೆದರು. ಕೂಡಲೇ ಬಾಬು ಅದಕ್ಕಾಗಿಯೇ ಕಾದು ಕುಳಿತವನಂತೆ,'ಚೌಡಿಪೂಜೆ ಸರಿಯಾಗಿಲ್ಲ, ಅದಕ್ಕೆ ಮಳೆ ಬಂದಿಲ್ಲ' ಎಂದು ಮತ್ತೆ ಕಾಲು ಕೆರೆದ.'ಪೂಜೆ ಮಾಡಿದ್ದೇವೆ, ಯಾರಿಲ್ಲ ಅಂದವರು?' ಇನ್ನಾರೋ ಹೇಳಿದರು.'ಅದು ಸರಿಯಾಗಿಲ್ಲ, ಕುರಿ ಕಡಿಬೇಕಿತ್ತು- ನಾನು ಹೇಳಿಕೊಂಡಿದ್ದೆ.'ನೀನು ಹೇಳಿಕೊಂಡಿದ್ದರೆ, ನೀನು ಕುರಿ ಕಡ್ದು ಪೂಜೆಮಾಡು. ಒಟ್ಟು ನಮ್ಮೆಲ್ಲರ ಸಂಘಕ್ಕೂ ಅದಕ್ಕೂ ಏನು ಸಂಬಂಧ?' ನಾನು ತಿರುಗಿ ಅವನನ್ನೇ ಪ್ರಶ್ನಿಸಿದೆ.'ದೇವರ ಕಾರ್ಯಕ್ಕೆ ನೀವು ಹೀಗಂತೀರಲ್ಲ!?'ಈಗ ನನಗೂ ರೇಗತೊಡಗಿತ್ತು.'ಯಾವ ದೇವರು ನಿನ್ನತ್ರ ಬಂದು ಕುರಿ ಕೊಡು ಅಂತ ಕೇಳಿತ್ತು? ನಾವು ಕುರಿ ಕಡೀದೆ ಇದ್ರೆ ಇಡೀ ಊರಿಗೇ ಮಳೆ ಹೋಗುತ್ತಾ? ಅದ್ಯಾವುದು ಅಂಥ ದೇವ್ರೂ?' ದಬಾಯಿಸಿದೆ.'ನೀವು ದೇವರನ್ನು ನಂಬೋದಿಲ್ವೋ?''ಇ......ಲ್ಲ.'ಸರಿ ನಿಮ್ಮಿಷ್ಟ' ಏನೋ ಗೊಣಗುತ್ತಾ ಅಲ್ಲಿಂದೆದ್ದು ಹೋದ.
ಇದಾಗಿ ಒಂದೆರಡು ತಿಂಗಳು ಕಳೆದಿರಬೇಕು. ಯಾವುದೋ ಸಮಯದಲ್ಲಿ ಬಾಬು ತೋಟದ ಹೊರಗಿನ ಬೇರೊಬ್ಬ ಕೆಲಸಗಾರನಿಗೆ ಕೊಟ್ಟ ಸಾಲಕ್ಕೆ ನಾನು ಜಾಮೀನಾಗಿದ್ದೆ. ಸಾಲ ಪಡೆದವನು ಅವನಿಗೆ ಹಣ ವಾಪಸ್ ಕೊಟ್ಟಿರಲಿಲ್ಲ. ಇದ್ದಕ್ಕಿದ್ದಂತೆ ಬಾಬು ಒಂದು ದಿನ ನನ್ನ ಮುಂದೆ ಪ್ರತ್ಯಕ್ಷನಾದ. ಈತ ಎಂತಹ ತರಲೆ ಗಿರಾಕಿಯೆಂದರೆ ಯಾವುದೇ ಸಂದರ್ಭದಲ್ಲೂ ಎಲ್ಲವೂ ತನ್ನ ಮೂಗಿನ ನೇರಕ್ಕೆ ನಡೆಯಬೇಕೆಂದು ಹಠ ಹಿಡಿಯುತ್ತಿದ್ದ. ಆದ್ದರಿಂದ ಇವನನ್ನು ಕಂಡರೆ ನಮ್ಮ ಗುಂಪಿನಲ್ಲಿ ಯಾರಿಗೂ ಆಗುತ್ತಿರಲಿಲ್ಲ. ನನಗೂ ಅನೇಕ ಸಾರಿ ಕಿರಿಕಿರಿ ಮಾಡಿದ್ದ. ಬಾಬು ಬಂದವನೇ ನನ್ನನ್ನು ಆಪಾದಿಸುವ ಧ್ವನಿಯಲ್ಲಿ'ನಿಮ್ಮ ಜನ ದುಡ್ಡು ಕೊಟ್ಟಿಲ್ಲ' ಎಂದ.'ಕೊಡ್ತಾನೆ ಮಾರಾಯಾ, ಅವನೀಗ ಕಷ್ಟದಲ್ಲಿರಬೇಕು.''ಅವನ ಪರವಾಗಿ ನೀವು ಜಾಮೀನು.''ಅವನು ಕೊಡೋದಿಲ್ಲ ಅಂದ್ರೆ ನಾನು ಕೊಡ್ತೀನಿ ಆಯ್ತಲ್ಲ' ಅವನನ್ನು ಸಾಗಹಾಕಲು ಪ್ರಯತ್ನಿಸಿದೆ.'........................' ಬಾಬು ಅಲ್ಲೇ ನಿಂತಿದ್ದ.'ಯಾಕೆ ನಿನಗೆ ನಂಬಿಕೆ ಇಲ್ವೆ?''...........................''ನಂಬಿಕೆ ಇಲ್ಲದಿದ್ರೆ ಇಲ್ಲ ಅಂತ ಹೇಳು- ಏನೀಗ?' ಗದರಿಸುವ ಧ್ವನಿಯಲ್ಲಿ ಹೇಳಿದೆ.'ಅಲ್ಲ, ನೀವು ದೇವರನ್ನೇ ನಂಬಲ್ಲ ಅಂತೀರಿ: ನಾನು ನಿಮ್ಮನ್ನು ನಂಬಬೇಕು ಅಂತೀರಿ...!!' ಬಾಬು ನನ್ನ ಬುಡವನ್ನೇ ಅಲ್ಲಾಡಿಸಿಬಿಟ್ಟಿದ್ದ. ಕೂಡಲೇ ಆ ಜಾಮೀನಿನ ಹಣವನ್ನು ನಾನೇ ಬಾಬುವಿಗೆ ಕೊಟ್ಟು, ನಂತರ ಸಾಲಗಾರನಿಂದ ವಸೂಲು ಮಾಡಿಕೊಂಡೆ.ನಮ್ಮ ನಂಬಿಕೆ, ವಿಚಾರಗಳೇನೇ ಇರಲಿ ಅದರ ಬೆಂಬಲಕ್ಕೆ ಅನುಭವದ ಗಟ್ಟಿತನವಿಲ್ಲದಿದ್ದರೆ ನಮ್ಮ ನಿಲುವುಗಳೆಲ್ಲ ಪೊಳ್ಳಾಗಿಬಿಡಬಹುದೆಂಬ ಭಯವಾಯಿತು. ಆಮೇಲೆ ಯಾರಾದರೂ ದೇವರಿದ್ದಾನೋ ಇಲ್ಲವೋ ಎಂದರೆ 'ಗೊತ್ತಿಲ್ಲ'ಎನ್ನತೊಡಗಿದೆ!
ದಿಸ್ ಈಸ್ ನಾಟ್ ಎ ಹಿಡನ್ ಕ್ಯಾಮೆರಾ !


ಮಾತಿನಲ್ಲಿ ಹೇಳಲಾರೆನು !
- ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ೧.೫೦ಲಕ್ಷ ರೂಗಳ ಖರ್ಚುವೆಚ್ಚದ ತಾಳಮದ್ದಳೆ ಸಪ್ತಾಹ
- ಏಳು ದಿನಗಳಲ್ಲಿ ಸುಮಾರು ೨ ಸಾವಿರ ಜನರ ಪಾಲ್ಗೊಳ್ಳುವಿಕೆ (ತಾಳಮದ್ದಳೆಗೆ ಇದೊಂದು ದೊಡ್ಡ ಸಂಖ್ಯಾಬಲ !)
- ಮಹಾನಗರದ ಆಫೀಸು ಕೆಲಸ, ಟ್ರಾಫಿಕ್ ಜಾಮ್, ಮಳೆ ಮುಂತಾದ ಪ್ರತಿಕೂಲಗಳ ಮಧ್ಯೆಯೂ ನಾನಾ ಕ್ಷೇತ್ರ, ಭಾಗಗಳ ಜನರ ಪಾಲ್ಗೊಳ್ಳುವಿಕೆ
- ತೆಂಕು-ಬಡಗು ಎರಡೂ ತಿಟ್ಟುಗಳ ಸಮ್ಮಿಲನ, ಬೆಂಗಳೂರಿನ ಬಹುತೇಕ ಯಕ್ಷ ಸಂಘಟನೆಗಳ ಸಹಕಾರ
- ಎಲ್ಲ ತಾಳಮದ್ದಳೆಗಳ ವ್ಯವಸ್ಥಿತ ಧ್ವನಿ ಮುದ್ರಣ, ಪ್ರತಿದಿನ ೩ ಗಂಟೆ ೩೦ ನಿಮಿಷಗಳ ನಿಗದಿತ ಅವಧಿ.

ಆವತ್ತು ಸಂಜೆಯಾಗುತ್ತಿದ್ದಂತೆ ಬಸವನಗುಡಿಯ ಪುತ್ತಿಗೆ ಮಠದ ಸಭಾಂಗಣದಲ್ಲಿ ಒಟ್ಟಾಗುತ್ತಿದ್ದ ಜನರೆಲ್ಲ , ಪುರಾಣಗಳಿಂದ ಹೊರಬಂದ ಯಾವ್ಯಾವುದೋ ಪಾತ್ರಗಳಂತೆ ಮಾತಾಡಿಕೊಳ್ಳುತ್ತಿದ್ದರು. ಅವರವರ ಪಾಡಿಗೆ ಪ್ರಸಂಗ ಪದ್ಯಗಳನ್ನು ಗುನುಗುತ್ತಿದ್ದರು. ಮಹಾನಗರದ ಗದ್ದಲದಲ್ಲೂ ಎಲ್ಲಿಂದಲೋ ಹಾರ್ಮೋನಿಯಂ ಬಾರಿಸುವ, ಚೆಂಡೆ-ಮದ್ದಳೆಯ ಶ್ರುತಿ ಮಾಡುವ ಸದ್ದು ಕೇಳುತ್ತಿತ್ತು. ಆ ಪರಿಸರವೇ ಯಾವುದೋ ಅಜ್ಞಾತ ಸೆಳೆತಕ್ಕೆ ಸಿಕ್ಕಂತೆ ಒಂದು ಲಯದಲ್ಲಿ ತೂಗುತ್ತಿತ್ತು.
ಮೊದಲನೇ ದಿನದ ಪ್ರಸಂಗ 'ಕರ್ಣಪರ್ವ'. ಪ್ರಭಾಕರ ಜೋಶಿಯವರ ಎಂದಿನ ಅರ್ಜುನ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರ ಕರ್ಣ, ಶಂಭು ಶರ್ಮರ ಶಲ್ಯ, ಸುಧನ್ವಾ ದೇರಾಜೆ ಕೃಷ್ಣ, ಶಶಾಂಕ ಅರ್ನಾಡಿ ಅಶ್ವಸೇನನಾಗಿ ಕಾಣಿಸಿಕೊಂಡರು. ಕಿಂಚಿತ್ತೂ ವಾದದ ಕಿಚ್ಚು ಹತ್ತಿಕೊಳ್ಳದೆ ಅತ್ಯಂತ ಸುಗಮ ಮಾರ್ಗದಲ್ಲಿ ಈ ಪ್ರಸಂಗ ನಡೆದದ್ದು ಒಂದು ಅಚ್ಚರಿ ಮತ್ತು ನಿರಾಸೆಯ ಸಂಗತಿ ! ಹವ್ಯಾಸಿ ಭಾಗವತ ಸುಬ್ರಾಯ ಸಂಪಾಜೆ ಹಿಮ್ಮೇಳವನ್ನು ಮುನ್ನಡೆಸಿದರು. ಸಪ್ತಾಹದಲ್ಲಿ ಚೊಕ್ಕವಾಗಿ ನಡೆದ ಪ್ರಸಂಗ, ಎರಡನೇ ದಿನದ 'ವಾಲಿ ವಧೆ '. ಶಂಭುಶರ್ಮರ ಸುಗ್ರೀವ, ಜೋಶಿಯವರ ವಾಲಿ, ಸಿದ್ದಕಟ್ಟೆಯವರ ರಾಮ ಹಾಗೂ ಶಶಾಂಕ ಅರ್ನಾಡಿ ತಾರೆಯಾಗಿ ಭಾಗವಹಿಸಿದ ಪ್ರಸಂಗ ಲವಲವಿಕೆಯಿಂದ ನಡೆಯಿತು. ಆದರೆ ಮುಖ್ಯಮೂರೂ ಪಾತ್ರಗಳು ಒಂದೇ ತೆರನಾಗಿ ಮಾತಾಡಿ, ಪಾತ್ರದ ವೈಶಿಷ್ಟ್ಯಅನನ್ಯತೆ ಬಿಂಬಿತವಾಗುವುದು ತಪ್ಪಿಹೋಯಿತು. ಹೇರಂಜಾಲು ಗೋಪಾಲ ಗಾಣಿಗರ ಭಾಗವತಿಕೆಯ ಬಡಗುತಿಟ್ಟಿನ ಹಿಮ್ಮೇಳದ, 'ಭೀಷ್ಮ ವಿಜಯ' ಪ್ರಸಂಗದಲ್ಲಿ ಸಿದ್ಧಕಟ್ಟೆಯವರ ಭೀಷ್ಮ , ಶಂಭು ಶರ್ಮರ ಪರಶುರಾಮ ಹಾಗೂ ಹವ್ಯಾಸಿ ಅರ್ಥಧಾರಿಗಳಾದ ಮೂಜೂರು ನಾರಾಯಣ ಭಟ್ ಅಂಬೆ ಹಾಗೂ ಶಶಾಂಕ ಅರ್ನಾಡಿ ಸಾಲ್ವನಾಗಿ ಕಾಣಿಸಿಕೊಂಡರು. ಪ್ರಸಿದ್ಧ ಹಾಸ್ಯಗಾರ ಹಳ್ಳಾಡಿ ಜಯರಾಮ ಶೆಟ್ಟರು ಬ್ರಾಹ್ಮಣನ ಪಾತ್ರ ನಿರ್ವಹಿಸಿದ್ದು ಅಂದಿನ ವಿಶೇಷ ಆಕರ್ಷಣೆ. ಅಂಬೆ-ಭೀಷ್ಮನ ಮೊದಲ ಸಂವಾದ ತುಸು ಚರ್ಚೆಯ ವಾತಾವರಣ ಸೃಷ್ಟಿಸಿದರೂ, ಬಳಿಕ ಅಂತಹದ್ದೇನೂ ಆಗಲಿಲ್ಲ. ಸಾಲ್ವ-ಅಂಬೆ ಸಂವಾದ ತುಸು ಲಂಬಿಸಿದರೆ, ಪರಶುರಾಮ-ಭೀಷ್ಮ ಸಂವಾದ ಪದ್ಯಗಳ ವ್ಯಾಪ್ತಿಯಲ್ಲೇ ಚುಟುಕಾಗಿ ಮುಗಿಯಿತು.

ಘೋರ-ಮಾಯಾ ಶೂರ್ಪನಖಿಯಾಗಿ ಸಪ್ತಾಹದ ನಾಲ್ಕನೇ ದಿನ ಕಾಣಿಸಿಕೊಂಡರು ಪ್ರಭಾಕರ ಜೋಶಿ. ಸಿದ್ದಕಟ್ಟೆಯವರದ್ದು ಎಂದಿನ ರಾಮ. ಶಂಭು ಶರ್ಮರು ಬಹಳ ಚುಟುಕಾಗಿ ಲಕ್ಷ್ಮಣನ ಪಾತ್ರ ನಿರ್ವಹಿಸಿದರು. ಹೇರಂಜಾಲು ಗೋಪಾಲ ಗಾಣಿಗ ಹಾ ತೆಂಕಬೈಲು ಮುರಳಿಕೃಷ್ಣ ಶಾಸ್ತ್ರಿಗಳ ದ್ವಂದ್ವ ಹಾಡುಗಾರಿಕೆ, ಬಡಗು-ತೆಂಕಿನ ಎರಡೆರಡು ಚೆಂಡೆ ಮದ್ದಳೆಗಳ ಬಳಕೆ ಈ ಪ್ರಸಂಗವನ್ನು ರಂಜನೀಯವಾಗಿಸಿತು. ಕಡಿಮೆ ಪಾತ್ರಗಳ, ಗಂಭೀರ ಗತಿಯ ಪ್ರಸಂಗ 'ರಾವಣ ವಧೆ 'ಯಲ್ಲಿ ಜೋಶಿಯವರ ರಾವಣ-ಶಂಭು ಶರ್ಮರ ಮಂಡೋದರಿ. ತೀರಾ ಭಾವಪರವಶತೆಯ ಮಂಡೋದರಿಗೂ, ಜೋಶಿಯವರ ಉಢಾಪೆಯ ಶೈಲಿಗೂ ಅಷ್ಟೊಂದು ಹೊಂದಾಣಿಕೆ ಬರಲಿಲ್ಲ. ಪ್ರಸಂಗದ ನಡೆಗೆ ಅನುಕೂಲವಾಗಿ ಸಿದ್ದಕಟ್ಟೆಯವರ ರಾಮ.
ಸಪ್ತಾಹಕ್ಕೊಂದು ಹೊಸ ಸ್ವಾದ-ರುಚಿ ಸಿಕ್ಕಿದ್ದು ಆರನೇ ದಿನದ 'ಶ್ರೀಕೃಷ್ಣ ಸಂಧಾನ 'ದಿಂದ. ಅಂದು ಜಬ್ಬಾರ್ ಸಮೊರವರ ಅಪರೂಪದ ಕೃಷ್ಣ. ಯಾವಾಗಲೂ ಕೌರವನ ಅರ್ಥವನ್ನೇ ಹೇಳುವ ಅವರ ಇದಿರು ಕೌರವನಾಗಿ ಉಮಾಕಾಂತ ಭಟ್ಟರಿದ್ದರು. ಜೋಶಿಯವರು ವಿದುರನ ಪಾತ್ರದಲ್ಲಿ ಬಂದರು.ಕೊಂಚ ಹೊಸ ತರಹದ ಪಾತ್ರ ಹಂಚಿಕೆಯಾಗಿ, ಪುರುಷೋತ್ತಮ ಭಟ್ ಬಿ.ಸಿ. ರೋಡು ಅವರ ಭಾಗವತಿಕೆಯಲ್ಲಿ, ಸಪ್ತಾಹದ ಯಶಸ್ವಿ ತಾಳಮದ್ದಳೆಗಳಲ್ಲಿ ಈ ಪ್ರಸಂಗದ ಹೆಸರು ಸೇರಿಕೊಂಡಿತು.
ಸಮಾರೋಪದ ದಿನ ಅ.೧೯ರಂದು, ತುಂಬಿ ತುಳುಕಿದ ಸಭೆ ನೀಡುತ್ತಿದ್ದ ಚಪ್ಪಾಳೆಯ ಅಲೆಯಲ್ಲಿ ನಡೆದದ್ದು 'ಸುದರ್ಶನ ಗ್ರಹಣ' ಪ್ರಸಂಗ.' ಮೊದಲನೇ ಭೀಷ್ಮನಾಗಿ ಕುಂಬ್ಳೆ ಸುಂದರ ರಾವ್ ಹಾಗೂ ಜಬ್ಬಾರ್ ಅವರ ಕೌರವನ ಮಾತುಕತೆ, ಕುಶಲ ಮಾತುಕತೆಯಲ್ಲಿ ರಸಮಯವಾಯಿತು. ಎರಡನೇ ಭೀಷ್ಮನಾಗಿ ಜೋಶಿ ಮತ್ತು ಕೃಷ್ಣನಾಗಿ ಉಮಾಕಾಂತ ಭಟ್ಟರ ಸಂವಾದ ಸಪ್ತಾಹದ ಉತ್ತಮ ಮಾತುಕತೆಗಳಲ್ಲೊಂದು ಎನಿಸಿತು.ಒಂದು ವರ್ಷದಲ್ಲಿ ಹಿರಿಯ ಅರ್ಥಧಾರಿಗಳ ಭಾಗವಹಿಸುವಿಕೆಯ ಮೂರ್‍ನಾಲ್ಕು ಕೂಟಗಳೂ ಬೆಂಗಳೂರಿನಲ್ಲಿ ನಡೆಯದಿರುವ ಸನ್ನಿವೇಶದಲ್ಲಿ, ಸತತ ಏಳು ತಾಳಮದ್ದಳೆಗಳನ್ನು ಆಯೋಜಿಸಿದ 'ದುರ್ಗಾಂಬಾ ಕಲಾ ಸಂಗಮ'ಕ್ಕೆ ಸಿಕ್ಕಿದ್ದು ವ್ಯಾಪಕ ಮೆಚ್ಚುಗೆ , ಫೋನ್ ಕಾಲ್‌ಗಳ ಸುರಿಮಳೆ, ತಾಳಮದ್ದಳೆಯ ಬಗ್ಗೆ ಗೊತ್ತಿಲ್ಲದ ಜನರಿಂದಲೂ ಕಾರ್ಯಕ್ರಮದ ಬಗ್ಗೆ ವಿಚಾರಣೆ ! ಕೊನೆಯ ದಿನ 'ಶ್ರೀ ಮನೋಹರ ಸ್ವಾಮಿ ಪರಾಕು' ಪದ್ಯ ಬಂದು, ಕಾರ್ಯಕ್ರಮ ಕೊನೆಯ ಘಟ್ಟಕ್ಕೆ ತಲುಪಿದಾಗ ಎಲ್ಲರಿಗೂ ಗಂಟಲು ಕಟ್ಟಿತ್ತು, ಹೃದಯ ತುಂಬಿತ್ತು. ಕುರುಕ್ಷೇತ್ರ ಯುದ್ಧದಲ್ಲಿ ಕೃಷ್ಣನಿದಿರು ಬಂದ ಭೀಷ್ಮ ಹೇಳಿದರು : 'ದುಷ್ಟ ಶಿಕ್ಷಣ-ಶಿಷ್ಟ ರಕ್ಷಣ ಅಂತ ಹೇಳುವ ನೀನು, ಸಣ್ಣ ಪ್ರಾಯದಲ್ಲೇ ಅಷ್ಟೆಲ್ಲಾ ದುಷ್ಟರನ್ನು ಕೊಂದರೂ ಇನ್ನೂ ಅದೆಷ್ಟು ಜನ ಉಳಿದುಕೊಂಡಿದ್ದಾರೆ ದೇವರೇ?!' ಕೃಷ್ಣನ ನಾಲಗೆ ತಡವರಿಸಿತು.
(ಫೋಟೊ: ದುಷ್ಯಂತ ದೇರಾಜೆ, ಕ್ಯಾಮೆರಾ: ಶಶಾಂಕ ಅರ್ನಾಡಿ!)
ಮಾತಿನರಮನೆಯಲ್ಲಿ ಏಳು ದಿನಗಳು

ಎಲ್ಲರನ್ನೂ ಸಶರೀರಿಗಳಾಗಿಯೇ ಹದಿನಾಲ್ಕು ಲೋಕ ಸುತ್ತಿಸುವ ಸಾಮರ್ಥ್ಯವುಳ್ಳ ಯಕ್ಷಗಾನದ ಒಂದು ಪ್ರಮುಖ ಅಂಗ 'ಯಕ್ಷಗಾನ ತಾಳಮದ್ದಳೆ '. ಕರಾವಳಿ ಕರ್ನಾಟಕದುದ್ದಗಲಕ್ಕೂ ಮಳೆಗಾಲದಲ್ಲಿ ನೂರಾರು ತಾಳಮದ್ದಳೆ ಕೂಟಗಳು ನಡೆಯುತ್ತವೆ. ಯಾವುದೇ ವೇಷಭೂಷಣ, ವಿಶೇಷ ರಂಗಸಜ್ಜಿಕೆಯಿಲ್ಲದೆ, ಆಶು ಮಾತುಗಾರಿಕೆಯನ್ನೇ ಮಾಧ್ಯಮವಾಗಿಟ್ಟುಕೊಂಡಿರುವ ಪ್ರಕಾರ ಇದು. ಕೋಪ , ಹಾಸ್ಯ, ದುಃಖ ಎಲ್ಲವೂ ಇಲ್ಲಿ ಮಾತಿನಲ್ಲೇ ವ್ಯಕ್ತವಾಗಬೇಕು !
ಉತ್ತರ ಕನ್ನಡ ಭಾಗದಲ್ಲಿ ಪ್ರಸಂಗ ಅಥವಾ ಬೈಠಕ್ ಎಂದು, ಶಿವಮೊಗ್ಗ ಭಾಗದಲ್ಲಿ ಜಾಗರ ಎಂದು, ದಕ್ಷಿಣಕನ್ನಡ ಭಾಗದಲ್ಲಿ ಕೂಟ ಎಂದೂ ಕರೆಯಲ್ಪಡುವ `ಯಕ್ಷಗಾನ ತಾಳಮದ್ದಳೆ ' ಯಕ್ಷಲೋಕದ ಅವಿಭಾಜ್ಯ ಅಂಗ. ಪುರಾಣಗಳ ಒಂದು ಚಿಕ್ಕ ಪ್ರಸಂಗ ಆಯ್ದುಕೊಂಡು, ಅರ್ಥಧಾರಿಗಳು ಒಂದೊಂದು ಪಾತ್ರ ವಹಿಸಿಕೊಂಡು ಮಾತಿನಲ್ಲೇ ಎಲ್ಲವನ್ನೂ ನಿರ್ವಹಿಸುತ್ತಾರೆ. ಅದೂ ಕಂಠಪಾಠವಲ್ಲದ ಆಶುಶೈಲಿ. ಇದಿರು ಅರ್ಥಧಾರಿಯ ಮನೋಧರ್ಮ, ಆಯಾ ಸಂದರ್ಭಗಳಿಗೆ ಅನುಗುಣವಾಗಿ, ಇಂದು ಕರ್ಣನ ಪಾತ್ರ ವಹಿಸಿದವನು ನಾಳೆ ಅದೇ ಪಾತ್ರವನ್ನು ಸಂಪೂರ್ಣ ಬೇರೆ ಥರ ನಿರ್ವಹಿಸಬಹುದು. ಕೌರವನೊಡನೆ ವಾದದಲ್ಲಿ ಕೃಷ್ಣ ಸೋಲಬಹುದು ! ಹೀಗೆ ಇದು ಅನಿರೀಕ್ಷಿತಗಳ ಸಂಗಮ. ವಿದ್ವತ್ತು, ಮಾತಿನ ಜಾಣ್ಮೆ, ತರ್ಕ, ಉದಾಹರಿಸುವ ಕೌಶಲ, ಹಾಸ್ಯ ಪ್ರಜ್ಞೆ, ಲೌಕಿಕ-ಸಮಕಾಲೀನ ವಿಷಯಗಳನ್ನು ಪ್ರಸಂಗಕ್ಕೆ ಹೊಂದಿಸುವ ಶಕ್ತಿ ಎಲ್ಲವೂ ಇಲ್ಲಿರಬೇಕು.
'ತಾಳಮದ್ದಳೆ ಪ್ರಸಂಗ ' ಎಂಬ ಲೇಖನದಲ್ಲಿ ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿಯವರು ಹೀಗೆ ಹೇಳಿದ್ದಾರೆ : 'ತಾಳಮದ್ದಳೆಯಲ್ಲಿ ಕತೆಯನ್ನು ತನಗೆ ಬೇಕಾದಂತೆ ಬೆಳೆಸಲು ಅರ್ಥಧಾರಿಗೆ ಸ್ವಾತಂತ್ರ್ಯವಿದೆ. ಅರ್ಥಧಾರಿ ಪಾತ್ರವೂ ಆಗುವುದರಿಂದ ತಿಳಿವಳಿಕೆ ಮತ್ತು ಅನುಭವ ಒಂದರೊಳಗೊಂದು ಹುಟ್ಟಿ ಬರುತ್ತವೆ. ಒಂದು ದೃಷ್ಟಿಯಿಂದ ಹೇಳಬೇಕೆಂದರೆ ಮೂಲ ಕತೆಯಲ್ಲಿಯ ಪಾತ್ರಗಳಿಗೆ ಮತ್ತೊಮ್ಮೆ ಬದುಕುವ ಅವಕಾಶ ದೊರೆತಂತಾಗುತ್ತದೆ. ಕರ್ಣನ ಬದುಕು ಹೀಗೆಯೇ ಕೊನೆಗೊಳ್ಳಬೇಕೇ ಎಂದು ಕೇಳಿದರೆ, ಕರ್ಣನಿಗೆ ಮತ್ತೊಮ್ಮೆ ಬದುಕಿ ತೋರಿಸುವ ಅವಕಾಶ ಇಲ್ಲಿ ದೊರೆತಂತಾಗುತ್ತದೆ ...ಮಹಾಭಾರತ ಕತೆಯಲ್ಲಿ ವಾದಗ್ರಸ್ತ ಅಂಶಗಳು ಎಷ್ಟಿವೆಯೆಂದರೆ, ನಮ್ಮ ಮನಸ್ಸು ಇವುಗಳ ಬಗ್ಗೆ ಎಷ್ಟು ಗೊಂದಲಕ್ಕೀಡಾಗಿದೆಯೆಂದರೆ, ಪಾಂಡವರೇ ಕೆಟ್ಟವರು, ಕೌರವರು ಒಳ್ಳೆಯವರು ಎಂಬ ನಿರ್ಣಯಕ್ಕೆ ಕೆಲವರಾದರೂ ಬಂದರೆ ಆಶ್ಚರ್ಯವೇನಿಲ್ಲ. ಒಳಿತು ಮತ್ತು ಕೆಡುಕುಗಳನ್ನು ಗುರುತಿಸಿ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾಯಿಸುವುದನ್ನು ಬಿಟ್ಟರೆ ಬೇರೇನೂ ಮಾಡುವಂತಿಲ್ಲ.
ತಾಳಮದ್ದಳೆಯಲ್ಲಿ ಇಂಥ ಚರ್ಚೆಗೆ ಅವಕಾಶವಿದೆ. ಕೌರವನ ಪಾತ್ರಧಾರಿ ಮಾತಾಡುತ್ತ ಚರ್ಚೆಯಲ್ಲಿ ಕೃಷ್ಣನನ್ನು ಸೋಲಿಸಿಬಿಡಬಹುದು. ಅಂತಹ ಒಂದು ಪ್ರಸಂಗವನ್ನೇ ನಾನು ತಾಳಗುಪ್ಪೆಯಲ್ಲಿ ಕಂಡದ್ದು. ಅರ್ಥಧಾರಿ ಗೆದ್ದು ಪಾತ್ರ ಸೋಲುವಂತಾಯಿತು ! ಆದರೆ ಕೌರವನ ಅರ್ಥಧಾರಿ, ಅಂದು ಕತೆಯಲ್ಲಿ ಹುಟ್ಟಿಕೊಂಡ ಬಿಕ್ಕಟ್ಟನ್ನು ತಿಳಿದುಕೊಂಡು `ಕೃಷ್ಣಾ, ನನ್ನ ಅಹಂಕಾರದ ತೃಪ್ತಿಗಾಗಿ ನನ್ನನ್ನು ಗೆಲ್ಲಿಸಿದವನೂ ನೀನೇ, ಕೊನೆಗೆ ಸೋಲಿಸುವವನೂ ನೀನೇ. ನೀನು ಕರುಣಾಶಾಲಿಯಾಗಿದ್ದರೆ ನನ್ನನ್ನು ಸೋಲಿಸಿ ಕಾಯಬೇಕು, ಪಾಂಡವರನ್ನು ನೀನು ಕಾಯುವಂತೆ '. ಪ್ರತಿಭಾಶಾಲಿಯಾದ ಅರ್ಥಧಾರಿ ಮಹಾಭಾರತಕ್ಕೆ ತನ್ನೆರಡು ಮಾತುಗಳನ್ನು ಸೇರಿಸಿ ಅದನ್ನು ಅರ್ಥಪೂರ್ಣವನ್ನಾಗಿ ಹೇಗೆ ಮಾಡಬಹುದೆಂಬುದನ್ನು ಅಂದು ತೋರಿಸಿದರು .'
ಬೆಂಗಳೂರಿನಲ್ಲೀಗ ಯಕ್ಷಗಾನ ಬಯಲಾಟಗಳಿಗೆ ಕೊರತೆಯಿಲ್ಲ. ಮಾತಿನ ರುಚಿ ತೋರಬಲ್ಲ ತಾಳಮದ್ದಳೆಗಳು ಮಾತ್ರ ತೀರಾ ಕಡಿಮೆ. ಕಳೆದೊಂದು ವರ್ಷದಿಂದ ಸದಭಿರುಚಿಯ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ `ಶ್ರೀ ದುರ್ಗಾಂಬಾ ಕಲಾ ಸಂಗಮ' ಎಂಬ ಗಿರಿನಗರದ ಸಂಸ್ಥೆ ಏಳು ದಿನಗಳ ತಾಳಮದ್ದಳೆ ಹಮ್ಮಿಕೊಂಡಿದೆ. ಕರ್ನಾಟಕ-ಕೇರಳ ರಾಜ್ಯಗಳ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ವಿ.ವಿ.ಯ ಗೌರವ ಡಾಕ್ಟರೇಟ್, ಪಡೆದ ಮಾತಿನ ಮಹಾಕವಿ ಡಾ.ಶೇಣಿ ಗೋಪಾಲಕೃಷ್ಣ ಭಟ್ (೧೯೧೮-೨೦೦೬), ತಾಳಮದ್ದಳೆಯಲ್ಲಂತೂ ಉತ್ತುಂಗ ಶಿಖರ.ಹೀಗಾಗಿ ಡಾ. ಶೇಣಿ ಸಂಸ್ಮರಣೆ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಥಮ ಅಧ್ಯಕ್ಷ ಕುಂಬ್ಳೆ ಸುಂದರರಾವ್ ಅಭಿನಂದನೆಯೊಂದಿಗೆ ಏಳು ದಿನಗಳ ತೆಂಕು-ಬಡಗು ತಿಟ್ಟುಗಳ ಸಮ್ಮಿಲನದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಅ.೧೩ರಿಂದ ೧೯ರವರೆಗೆ ನಡೆಯಲಿದೆ.
ತಾಳಮದ್ದಳೆ ಕ್ಷೇತ್ರದ ಹಿರಿಯ ಅರ್ಥಧಾರಿಗಳಾಗಿರುವ ಡಾ.ಎಂ. ಪ್ರಭಾಕರ ಜೋಶಿ, ಶಂಭು ಶರ್ಮ ವಿಟ್ಲ, ಉಮಾಕಾಂತ ಭಟ್ ಮೇಲುಕೋಟೆ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಜಬ್ಬಾರ್ ಸಮೊ ಸಂಪಾಜೆ ಮೊದಲಾದವರು ಆಗಮಿಸುತ್ತಾರೆ. ೧೩ರಂದು ಕರ್ಣಪರ್ವ ೧೪-ವಾಲಿ ಮೋಕ್ಷ, ೧೫-ಭೀಷ್ಮ ವಿಜಯ, ೧೬-ಶೂರ್ಪನಖಾ ಮಾನಭಂಗ,೧೭-ರಾವಣ ವಧೆ, ೧೮-ಶ್ರೀಕೃಷ್ಣ ಸಂಧಾನ, ೧೯-ಸುದರ್ಶನ ಗ್ರಹಣ- ಪ್ರಸಂಗಗಳು 'ಕನ್ನಡ ಮತ್ತು ಸಂಸ್ಕೃತಿ ಇಲಾಖೆ 'ಯ ಸಹಯೋಗದಲ್ಲಿ ನಡೆಯಲಿವೆ.
೧೩ರಂದು ಸಂಜೆ ೪.೩೦ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು , ಯಕ್ಷಗಾನ ಯೋಗಕ್ಷೇಮ ಅಭಿಯಾನದ ವಿ.ಆರ್.ಹೆಗಡೆ, ಯಕ್ಷಗಾನ ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ, ಹಿರಿಯ ಸಮಾಜಸೇವಕ ಬಿ.ಕೃಷ್ಣ ಭಟ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಕುಂಬ್ಳೆ ಸುಂದರರಾವ್, ಕರ್ನಾಟಕ ಬ್ಯಾಂಕ್ ಮುಖ್ಯ ಪ್ರಬಂಧಕ ಆನಂದರಾಮ ಉಪಾಧ್ಯಾಯ, ಸಂಗೀತ ನಿರ್ದೇಶಕ ವಿ.ಮನೋಹರ್, ಎ.ಶಿವರಾವ್ ಅತಿಥಿಗಳಾಗಿ ಭಾಗವಹಿಸುತ್ತಾರೆ. ೧೯ರಂದು ಸಂಜೆ ೪ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ, ಕೆ.ಐ.ಎ.ಡಿ.ಬಿ. ಆಯುಕ್ತ ಟಿ.ಶ್ಯಾಮ ಭಟ್, ಬಸವನಗುಡಿ ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ, ಗಾಯಕ ವಿದ್ಯಾಭೂಷಣ, ಕೆ.ಇ.ರಾಧಾಕೃಷ್ಣ ಮೊದಲಾದವರು ಭಾಗವಹಿಸುತ್ತಾರೆ. ಪ್ರತಿದಿನ ಸಂಜೆ ೫.30 ರಿಂದ ೯ರವರೆಗೆ ತಾಳಮದ್ದಳೆ.
ಸ್ಥಳ : ಶ್ರೀ ಪುತ್ತಿಗೆ ಮಠದ ಸಭಾಂಗಣ, ಬಸವನಗುಡಿ. ( ಬ್ಯೂಗಲ್ ರಾಕ್ ಬಳಿ) ಪ್ರವೇಶ ಉಚಿತ.
